ಸಾರಾಂಶ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕು.
ಕಂಪ್ಲಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಬೇಕೆಂದು ಬಳ್ಳಾರಿ ಡಿಸಿ ನಾಗೇಂದ್ರ ಪ್ರಸಾದ್ ಮನವಿ ಮಾಡಿದ್ದಾರೆ.
ತಾಲೂಕಿನ ಎಮ್ಮಿಗನೂರು ಗ್ರಾಮಕ್ಕೆ ಭಾನುವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿದರು. ಈ ವೇಳೆ ಸ್ಥಳೀಯ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ ಡಿಸಿ ಸಮೀಕ್ಷಾ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಯಾರೂ ಅಸಹನೆಯಿಂದ ವರ್ತಿಸದೆ, ತಾಳ್ಮೆಯಿಂದ ಹಾಗೂ ನಿಖರವಾದ ಮಾಹಿತಿ ನೀಡಬೇಕು. ನಿಮ್ಮ ಸಹಕಾರದಿಂದಲೇ ಸಮೀಕ್ಷೆಯು ಯಶಸ್ವಿಯಾಗುತ್ತದೆ. ಸಮೀಕ್ಷೆ ಪ್ರತಿ ಕುಟುಂಬದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ದಾಖಲೆ ಮಾಡುವುದು ಮುಖ್ಯ ಉದ್ದೇಶವಾಗಿದ್ದು, ಸರ್ಕಾರ ಮುಂದಿನ ದಿನಗಳಲ್ಲಿ ರೂಪಿಸುವ ವಿವಿಧ ಕಲ್ಯಾಣ ಹಾಗೂ ಹಿತಚಿಂತನಾ ಯೋಜನೆಗಳಿಗೆ ಈ ಮಾಹಿತಿ ಬಹಳ ಪೂರಕವಾಗಲಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಉಪಕರಣಗಳ ಮೂಲಕವೂ ಆಯೋಗದ ಅಧಿಕೃತ ವೆಬ್‌ಸೈಟ್ ಲಿಂಕ್ ಬಳಸಿ ಸ್ವತಃ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಕಾಶವಿದೆ ಎಂದು ವಿವರಿಸಿದರು. ಜೊತೆಗೆ, ಗಣತಿದಾರರು ಗ್ರಾಮಸ್ಥರಿಗೆ ಈ ಮಾಹಿತಿ ನೀಡುವಂತೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಇಸಿಒ ಟಿ.ಎಂ. ಬಸವರಾಜ, ಆರ್‌ಐ ವೈ.ಎಂ. ಜಗದೀಶ, ವಿಎಒ ರಬ್ಬು ಸೇರಿದಂತೆ ಇತರರಿದ್ದರು.