ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಜಿಲ್ಲೆಗಳ ಪಾಲಿಗೆ ವರದಾನ. ಚಿತ್ರದುರ್ಗ ಜಿಲ್ಲೆಯಲ್ಲಿ ನಾಲೆಗಳ ಕಾಮಗಾರಿ ಪೂರ್ಣಗೊಂಡ ಕಾರಣ ಕಾಲುವೆಗಳ ಮೂಲಕ ನೀರು ಹರಿದು ಕೆರೆಗಳಿಗೆ ಬಂದಿರುವುದು ಹರ್ಷದಾಯಕ.
ಕನ್ನಡಪ್ರಭ ವಾರ್ತೆ ಶಿರಾ
ಬರದ ಸಂಕಷ್ಟದಲ್ಲಿರುವ ಅನ್ನದಾತರಿಗೆ ಪ್ರತಿ ಎಕರೆಗೆ ೫ ಸಾವಿರ ರು. ಪರಿಹಾರ ನೀಡಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಜಿಲ್ಲೆಗಳ ಪಾಲಿಗೆ ವರದಾನ. ಚಿತ್ರದುರ್ಗ ಜಿಲ್ಲೆಯಲ್ಲಿ ನಾಲೆಗಳ ಕಾಮಗಾರಿ ಪೂರ್ಣಗೊಂಡ ಕಾರಣ ಕಾಲುವೆಗಳ ಮೂಲಕ ನೀರು ಹರಿದು ಕೆರೆಗಳಿಗೆ ಬಂದಿರುವುದು ಹರ್ಷದಾಯಕ. ತುಮಕೂರು ನಾಲೆಗೆ ನೀರು ಬರದೇ ಇರುವುದು ಬೇಸರದ ಸಂಗತಿ. ತುಮಕೂರು ನಾಲೆ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ೫೩೦೦ ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ ಅವರೊಂದಿಗೆ ಮಾತನಾಡಿದ್ದು ಅತಿ ಶೀಘ್ರ ತುಮಕೂರು ನಾಲೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ. ಶಿರಾ ಶಾಸಕ ಟಿ.ಬಿ. ಜಯಚಂದ್ರ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸ ಮಾಡಬೇಕು. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ನೀರು ಶಿರಾ ಭಾಗದ ಕೆರೆಗಳಿಗೆ ಹರಿದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಲಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಶ್ರೀನಿವಾಸ್, ಶ್ರೀಮಠದ ಆರ್.ಓ. ತಮ್ಮಣ್ಣ, ನಿರಂಜನ್ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.