ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಅತಿವೃಷ್ಟಿ-ಪ್ರವಾಹದಿಂದ ಉಂಟಾಗುವ ಮನೆ ಹಾನಿ, ಜನ-ಜಾನುವಾರುಗಳ ಹಾನಿಗೆ ನಿಗದಿತ ಅವಧಿಯಲ್ಲಿ ತುರ್ತಾಗಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅತಿವೃಷ್ಟಿ-ಪ್ರವಾಹದಿಂದ ಉಂಟಾಗುವ ಮನೆ ಹಾನಿ, ಜನ-ಜಾನುವಾರುಗಳ ಹಾನಿಗೆ ನಿಗದಿತ ಅವಧಿಯಲ್ಲಿ ತುರ್ತಾಗಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅತಿವೃಷ್ಟಿ ಪ್ರವಾಹದಿಂದ ಹಾನಿಗೀಡಾದ ಮನೆಗಳಿಗೆ ೭೨ ಗಂಟೆಯೊಳಗೆ ಹಾಗೂ ಜಾನುವಾರು ಹಾನಿಗೆ ೪೨ ಗಂಟೆಯೊಳಗೆ ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ತುರ್ತಾಗಿ ನೀಡುವ ಪರಿಹಾರವಾಗುವುದರಿಂದ ಈ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿ ಯಾವುದೇ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳದೇ, ಪ್ರಕರಣಗಳನ್ನು ಇತ್ಯರ್ಥಪಡಿಸಿ, ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಬೆಳೆ ಹಾನಿಗೆ ಸಂಬಂಧಿಸಿದ ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಳ್ಳದಂತೆ ಸೂಚಿಸಿದ ಅವರು, ಬೆಳೆ ಹಾನಿ ಪರಿಹಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕಾರ್ಯದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸದೇ, ರೈತರನ್ನು ಅಲೆದಾಡಿಸದೇ ಪರಿಹಾರ ಪೋರ್ಟಲ್ ಮೂಲಕ ನಿಗದಿತ ಕಾಲಾವಧಿಯೊಳಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಜಿಲ್ಲೆಯ ಗ್ರಾಮ ಮಟ್ಟದಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಓವರ್ ಟ್ಯಾಂಕ್ ಸ್ವಚ್ಛಗೊಳಿಸುವ ಮಾಹಿತಿ ಜನರಿಗೆ ಒದಗಿಸಬೇಕು. ಸ್ವಚ್ಛಗೊಳಿಸಿದ ಕುರಿತು ಸಂಬಂಧಿಸಿದ ಗ್ರಾಮ ಪಂಚಾಯತಿಯಲ್ಲಿ ಲಾಗ್ ಪುಸ್ತಕ ನಿರ್ವಹಿಸಿ, ಪುಸ್ತಕದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹಿ ಮಾಡಿ ದೃಢೀಕರಿಸಿ ಸಂರಕ್ಷಿಸಿಡಬೇಕು. ಜಿಲ್ಲೆಯಲ್ಲಿ ವಿಫಲವಾದ ಬೋರ್‌ವೆಲ್‌ಗಳು ಇರದಂತೆ ನೋಡಿಕೊಳ್ಳಬೇಕು. ಇಂತಹ ಬೋರ್‌ವೆಲ್ ಕಂಡು ಬಂದಲ್ಲಿ ಕೂಡಲೇ ಮುಚ್ಚಲು ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಬೋರ್‌ವೆಲ್‌ಗಳ ಮಾಹಿತಿಯನ್ನು ಅಧೀನ ಸಿಬ್ಬಂದಿಯಿಂದ ಸಂಗ್ರಹಿಸಿಟ್ಟುಕೊಳ್ಳುವಂತೆ ಅವರು ಸೂಚನೆ ನೀಡಿದರು.ವಿಪತ್ತು ನಿರ್ವಹಣೆಯಲ್ಲಿ ಅಗ್ನಿಶಾಮಕ ಇಲಾಖೆ ಪಾತ್ರ ಅತಿ ಮಹತ್ವದ್ದಾಗಿದೆ. ಕಳೆದ ೫ ವರ್ಷಗಳಲ್ಲಿ ಅಗ್ನಿ ಶಾಮಕ ಇಲಾಖೆಗೆ ಬಂದಿರುವ ದೂರುಗಳು, ದೂರುಗಳಿಗೆ ಸ್ಪಂದಿಸಿದ ವಿವರ ಸೇರಿದಂತೆ ವರ್ಗೀಕರಿಸಿ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ತುರ್ತು ಸಂದರ್ಭದಲ್ಲಿ ರಕ್ಷಣಾ ಸಮಾಗ್ರಿ ಬೋಟ್ಸ್, ರೋಪ್ಸ್, ಲೈಫ್ ಜಾಕೆಟ್, ಇತ್ಯಾದಿ ಸಾಮಗ್ರಿಗಳನ್ನು ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ಸುಸಜ್ಜಿತವಾಗಿಟ್ಟುಕೊಳ್ಳಬೇಕು. ಕೃಷ್ಣಾ, ಭೀಮಾ ನದಿ ಒಳ ಹರಿವು ಕುರಿತು ಮಹಾರಾಷ್ಟ್ರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಿಂದ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ೧೦೭೭ ಇದ್ದು, ತಾಲೂಕು ಮಟ್ಟದಲ್ಲಿ ಸಹಾಯವಾಣಿ ಆರಂಭಿಸಬೇಕು. ಆಗಾಗ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಪ್ರವಾಹ ಎದುರಿಸಲು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನ ನೀಡಬೇಕು. ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಮೂಡಿಸುವಂತೆ ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಸರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಕೋಟ್‌ಜಿಲ್ಲೆಯಲ್ಲಿ ಅತಿವೃಷ್ಟಿ-ಪ್ರವಾಹಕ್ಕೊಳಪಡುವ ಪ್ರದೇಶಗಳ ಮಾಹಿತಿಯನ್ನು ಅಧಿಕಾರಿಗಳು ಮುಂಚಿತವಾಗಿ ಹೊಂದಿರಬೇಕು. ಯಾವ ನದಿಯಿಂದ ಎಷ್ಟು ಪ್ರಮಾಣದ ನೀರು ಬಂದಲ್ಲಿ ಹಳ್ಳಿಗಳು ಬಾಧಿತವಾಗಲಿವೆ ಎಂಬುದನ್ನು ತಿಳಿದಿರಬೇಕು. ಸಂಪೂರ್ಣ ಮಾಹಿತಿ ಅರಿತುಕೊಂಡಲ್ಲಿ ಮಾತ್ರ ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಮಾಹಿತಿ ಅರಿತುಕೊಳ್ಳಬೇಕು.ಡಾ.ಆನಂದ.ಕೆ. ಜಿಲ್ಲಾಧಿಕಾರಿ