ಗದಗ: ಯುವಕರು ಮುದುಕರಾಗುತ್ತಾರೆ, ಮುದುಕರು ಯುವಕರಾಗುವುದಿಲ್ಲ. ಹೀಗಾಗಿ ಹಿರಿಯರು ಎಲ್ಲ ಜವಾಬ್ದಾರಿಯನ್ನೂ ತಮ್ಮಲ್ಲೇ ಇಟ್ಟುಕೊಳ್ಳದೆ, ಯುವಕರ ಕೈಗೆ ಉದ್ಯೋಗ, ಉದ್ಯಮದ ಅವಕಾಶಗಳನ್ನು ನೀಡಿ ಅವರಿಗೆ ಸೂಕ್ತ ಮಾರ್ಗದರ್ಶ ನೀಡಿ, ಮುನ್ನೆಲೆಗೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸೂಡಿ- ಗದಗ ಜುಕ್ತಿ ಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಕೆ.ಎಚ್. ಪಾಟೀಲ ಸಭಾಂಗಣದಲ್ಲಿ ನಡೆದ ಗದಗ ಉತ್ಸವ- 2026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗದಗ ಮುದ್ರಣ ಕಾಶಿಯಾಗಿ ಗುರುತಿಸಿಕೊಂಡಿದ್ದರೂ, ಇದೀಗ ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲೂ ತನ್ನದೇ ಛಾಪು ಮೂಡಿಸಿದೆ. ಉದ್ಯಮಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದಲ್ಲಿ ಗದಗ ಪರಿಸರದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದರು.

ವಿಧಾನಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿ, ಕೃಷಿ ಪ್ರಧಾನ ಗದಗ ಜಿಲ್ಲೆಯಲ್ಲಿ ಕೃಷಿ ಹಾಗೂ ಜವಳಿ ಆಧರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಉದ್ಯಮ ಆರಂಭಿಸುವ ಮುನ್ನ ಕಚ್ಚಾವಸ್ತು, ಮಾರುಕಟ್ಟೆ, ನುರಿತ ಕಾರ್ಮಿಕರು ಹಾಗೂ ಸಾರಿಗೆ ವ್ಯವಸ್ಥೆ ಕುರಿತು ಅಧ್ಯಯನ ಅಗತ್ಯ. ಕೇವಲ ಸಬ್ಸಿಡಿ ನಿರೀಕ್ಷೆಯಲ್ಲಿ ಉದ್ಯಮ ಆರಂಭಿಸಿ ವಿಫಲರಾಗಬಾರದು ಎಂದರು.

ಕಪ್ಪತಗುಡ್ಡದ ನೈಸರ್ಗಿಕ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಪರಿಸರಸ್ನೇಹಿ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಮುದ್ರಾ ಯೋಜನೆಗಳ ಮೂಲಕ ಯುವಕರು ಉದ್ಯಮಶೀಲರಾಗಬೇಕು ಎಂದರು.


ಈ ವೇಳೆ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಮಧುಸೂದನ ಪುಣೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಚೇಂಬರ್ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಜಯದೇವ ಮೆಣಸಗಿ, ಪ್ರಕಾಶ ಉಗಲಾಟ, ಸಿದ್ರಾಮಪ್ಪ ಉಮಚಗಿ, ಚನ್ನವೀರಪ್ಪ ಹುಣಶೀಕಟ್ಟಿ, ರಾಘವೇಂದ್ರ ಕಾಲವಾಡ, ಅಶೋಕ ಸಂಕಣ್ಣವರ, ಅರವಿಂದ ಕಾಮತ, ಮಂಜುನಾಥ ವೀರಲಿಂಗಯ್ಯನಮಠ, ವಿಜಯಕುಮಾರ ಹಿರೇಮಠ, ಜ್ಯೋತಿ ದಾನಪ್ಪಗೌಡ್ರ, ಪೂರ್ಣಿಮಾ ಆಟದ ಸೇರಿದಂತೆ ಇತರರು ಇದ್ದರು. ಚಂದ್ರು ಬಾಳಿಹಳ್ಳಿಮಠ, ಮುರುಗೇಶ ಬಡ್ನಿ ನಿರೂಪಿಸಿದರು. ಚನ್ನವೀರಪ್ಪ ಹುಣಶೀಕಟ್ಟಿ ವಂದಿಸಿರು.