ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸಿ: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ

| Published : Oct 19 2024, 12:23 AM IST

ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸಿ: ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆ ಒದಗಿಸುವಲ್ಲಿ ಅಧಿಕಾರಿ/ಸಿಬ್ಬಂದಿಗಳಿಂದ ವಿಳಂಬ ಹಾಗೂ ಲೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಸಲ್ಲಿಸುವ ದೂರುಗಳು ವೈಯಕ್ತಿಕ ದ್ವೇಷ ಹಾಗೂ ದುರುದ್ದೇಶಗಳಿಂದ ಕೂಡಿರಬಾರದು

ಕನ್ನಡಪ್ರಭ ವಾರ್ತೆ ತುಮಕೂರು

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆ ಒದಗಿಸುವಲ್ಲಿ ಅಧಿಕಾರಿ/ಸಿಬ್ಬಂದಿಗಳಿಂದ ವಿಳಂಬ ಹಾಗೂ ಲೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಸಲ್ಲಿಸುವ ದೂರುಗಳು ವೈಯಕ್ತಿಕ ದ್ವೇಷ ಹಾಗೂ ದುರುದ್ದೇಶಗಳಿಂದ ಕೂಡಿರಬಾರದು ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತದ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ತಿಳಿಸಿದರು.ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಅಹವಾಲುಗಳ ಸ್ವೀಕಾರ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ಧ್ಯೇಯದಂತೆ ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವುದೇ ಲೋಕಾಯುಕ್ತದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಸಾರ್ವಜನಿಕರ ಬಳಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಗಳನ್ನು ನಡೆಸಿ ಪರಿಹಾರ ನೀಡುವ ಪ್ರಯತ್ನ ಮಾಡಲಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಗೂ ಸಹ ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಗೌರವಯುತವಾಗಿ ಬದುಕಲು ಅಗತ್ಯವಿರುವ ಸಂವಿಧಾನಾತ್ಮಕ ಮೂಲಭೂತ ಹಕ್ಕುಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಕ್ಕುಗಳಿಗೆ ಚ್ಯುತಿ ಉಂಟಾದಾಗ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕಾನೂನಿನ ಅರಿವು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕಾನೂನಿನ ಅರಿವನ್ನು ಹೊಂದಿರಬೇಕು ಎಂದು ತಿಳಿಸಿದರು.

ಉಪ ಲೋಕಾಯುಕ್ತ, ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಮಾತನಾಡಿ, ಲೋಕಾಯುಕ್ತದಲ್ಲಿ ಪ್ರಸ್ತುತ 20,000 ದೂರು ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ ಶೇ.50 ರಷ್ಟು ದೂರು ಅರ್ಜಿಗಳು ಸುಳ್ಳುಗಳಿಂದ ಕೂಡಿವೆ. ಇದರಿಂದ ಲೋಕಾಯುಕ್ತದ ಸಮಯ ವ್ಯರ್ಥವಾಗುತ್ತಿದೆಯಲ್ಲದೆ ನೈಜ ದೂರು ಪ್ರಕರಣಗಳ ವಿಲೇವಾರಿಗೂ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.ಜಿಲ್ಲೆಯ ಕೊರಟಗೆರೆ ತಾಲೂಕಿನವನಾದ ನಾನು ನಮ್ಮ ಜಿಲ್ಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ವಿಶ್ವದಲ್ಲೇ ಅತ್ಯಂತ ಬಲಿಷ್ಠ ಪ್ರಜಾ ಪ್ರಭುತ್ವ ಹೊಂದಿರುವ ದೇಶದಲ್ಲಿ ಶೇ.80ರಷ್ಟು ವಿದ್ಯಾವಂತರಲ್ಲಿ ಕಾನೂನು ಅರಿವಿನ ಕೊರತೆಯಿದೆ. ವಿದ್ಯಾವಂತ ಮೋಸಗಾರರಿಂದ ಸರ್ಕಾರಿ ವ್ಯವಸ್ಥೆ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.ಲೋಕಾಯುಕ್ತ ಸಂಸ್ಥೆಯು ಸರ್ಕಾರಿ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಕಂಡು ಬರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಮತ್ತು ಅಧಿಕಾರಿಗಳಲ್ಲಿರುವ ವಿಳಂಬ ಧೋರಣೆಯನ್ನು ತಡೆಗಟ್ಟುವ ಉದ್ದೇಶದಿಂದ 1984ರಲ್ಲಿ ಸ್ಥಾಪನೆಗೊಂಡ ಸ್ವತಂತ್ರ ಸಂಸ್ಥೆಯಾಗಿದೆ. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಬೇಕು. ಸಾರ್ವಜನಿಕರು ಹಾಗೂ ಅಧಿಕಾರಿಗಳ ಮನಸ್ಥಿತಿ ಬದಲಾದಾಗ ಮಾತ್ರ ಸಂಪೂರ್ಣವಾಗಿ ಭ್ರಷ್ಟಾಚಾರವನ್ನು ಹೊಡೆದೋಡಿಸಲು ಸಾಧ್ಯ ಎಂದು ತಿಳಿಸಿದರು.ಭ್ರಷ್ಟಾಚಾರವು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಕ್ಯಾನ್ಸರ್ ರೋಗವನ್ನಾದರೂ ಗುಣಪಡಿಸಬಹುದು. ಆದರೆ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕ ಸೇವೆಯನ್ನು ಒದಗಿಸಬೇಕೇ ಹೊರತು ಹಣಕ್ಕಾಗಿ ಕೈಚಾಚಬಾರದು. ನಮ್ಮ ಅಸ್ತಿತ್ವವನ್ನು ನಾವು ಯಾರಿಗೂ ಮಾರಿಕೊಳ್ಳಬಾರದು. ನಾರದ ಮುನಿಗಳ ಉಪದೇಶದಿಂದ ರತ್ನಾಕರನು ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆಯಾದಂತೆ ಭ್ರಷ್ಟ ಅಧಿಕಾರಿ/ಸಿಬ್ಬಂದಿಗಳು ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕ ಮಾಹಿತಿಗಾಗಿ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ದೂರು-ದುಮ್ಮಾನ ಹೊತ್ತು ತಂದಿದ್ದ 430ಕ್ಕೂ ಹೆಚ್ಚು ಸಾರ್ವಜನಿಕರಿಗೆ ಲೋಕಾಯುಕ್ತದಿಂದ ಟೋಕನ್ ವಿತರಿಸಲಾಗಿತ್ತು. ದೂರು ಅರ್ಜಿಗಳನ್ನು ಸ್ವೀಕರಿಸಿ ಪರಿಶೀಲಿಸಿದ ಉಪಲೋಕಾಯುಕ್ತ ಬಿ. ವೀರಪ್ಪ ಅವರು, ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಜಯಂತ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಲೋಕಾಯುಕ್ತ ಅಪರ ನಿಬಂಧಕ ಜೆ.ವಿ.ವಿಜಯಾನಂದ, ಉಪ ನಿಬಂಧಕರಾದ ಬಸವರಾಜಪ್ಪ ಕೆ.ಎಂ., ಅರವಿಂದ ಎನ್.ವಿ., ತುಮಕೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ.ವಿ. ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.ಹಣದಿಂದ ಸರ್ಕಾರಿ ಕೆಲಸ ಎಂಬ ನಂಬಿಕೆ ದೂರ ಮಾಡಿ: ಸರ್ಕಾರಿ ಅಧಿಕಾರಿಗಳು ಸತ್ಯ, ನಿಷ್ಠೆಯಿಂದ ಕೆಲಸ ಮಾಡುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕು. ಹಣ ಮತ್ತು ಅಧಿಕಾರವಿದ್ದವರಿಗೆ ಮಾತ್ರ ಸರ್ಕಾರಿ ಸೇವೆ ದೊರೆಯುತ್ತವೆ ಎಂದು ಶೇ.೮೦ರಷ್ಟು ಜನರಲ್ಲಿ ನಂಬಿಕೆ ಇದೆ. ಇಂಥಹ ನಂಬಿಕೆಯನ್ನು ತೊಲಗಿಸಲು ಸರ್ಕಾರಿ ಅಧಿಕಾರಿಗಳು ಅನಗತ್ಯ ವಿಳಂಬ ಮಾಡದೆ ಸಾರ್ವಜನಿಕರಿಗೆ ನ್ಯಾಯಯುತವಾಗಿ ನಿಗಧಿತ ಕಾಲಾವಧಿಯಲ್ಲಿ ಸೇವೆ ಒದಗಿಸಬೇಕು ಎಂದು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ತಿಳಿಸಿದರು.

ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ರಾಮರಾಜ್ಯವಾಗಲು ಸಾಧ್ಯ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಜಾರಿಗೆ ತರುವ ಆದೇಶಗಳನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಗೊಳಿಸುವ ಬಹುದೊಡ್ಡ ಜವಾಬ್ದಾರಿ ಕಾರ್ಯಾಂಗದ ಮೇಲಿದ್ದು, ಸರ್ಕಾರದ ಪ್ರಮುಖ ಆಧಾರ ಸ್ತಂಭವಾದ ಕಾರ್ಯಾಂಗವು ವ್ಯವಸ್ಥಿತವಾಗಿ ತನ್ನ ಕಾರ್ಯ ನಿರ್ವಹಿಸಿದಾಗ ಮಾತ್ರ ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ನನಸಾಗಿಸಲು ಸಾಧ್ಯವೆಂದು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ತಿಳಿಸಿದರು.ಸುಳ್ಳು ಕೇಸ್‌ ದಾಖಲಿಸಿದರೆ ಕಠಿಣ ಕ್ರಮ: ಸರ್ಕಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾರಣಗಳಿಲ್ಲದೆ ಸುಳ್ಳು ಪ್ರಕರಣ ದಾಖಲಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಒಂದಕ್ಕಿಂತ ಹೆಚ್ಚು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದರು.ಜಿಲ್ಲೆಯಲ್ಲಿ ಲೋಕಾಯುಕ್ತಕ್ಕೆ ಸಂಬಂಧಿಸಿದಂತೆ 180 ದೂರುಗಳು ದಾಖಲಾಗಿದ್ದು, ಅ.14 ರಂದು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಕಾನೂನಿನ ಚೌಕಟ್ಟಿನಡಿ ಬಾಕಿ ಇರುವ ದೂರು ಅರ್ಜಿಗಳನ್ನು ನಿಯಮಾನುಸಾರ ಶೀಘ್ರವಾಗಿ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಶುಭ ಕಲ್ಯಾಣ್ ಜಿಲ್ಲಾಧಿಕಾರಿ