ಸಾರಾಂಶ
ಸರ್ಕಾರಿ ನೌಕರರ ಸಂಘದಿಂದ ಶಾಸಕ ಮಂಜುಗೆ ಸನ್ಮಾನ । ನೌಕರರ ಕ್ರೀಡಾಕೂಟ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಅರಕಲಗೂಡುಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ನೌಕರರ ಅವಶ್ಯಕತೆ ಇದೆ. ಅವರ ಬೇಡಿಕೆಗಳನ್ನ ಈಡೇರಿಸಲು ಏಕೆ ತಾತ್ಸಾರ, ನಮ್ಮ ಶ್ರಮಕ್ಕೆ ತಕ್ಕಂತೆ ಸೌಲಭ್ಯವನ್ನು ನೀಡಿ ಎಂದು ರಾಜ್ಯ ಸರ್ಕಾರವನ್ನು ಹಾಸನ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಒತ್ತಾಯಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ನೌಕರರ ಸಂಘ ಭಾನುವಾರ ಆಯೋಜಿಸಿದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ, ಸರ್ಕಾರಿ ನೌಕರರ ಬೇಡಿಕೆಗಳ ಮನವಿ ಸಲ್ಲಿಸುವ ಕಾರ್ಯಕ್ರಮ ಹಾಗೂ ನೌಕರರ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡಿದ ಅವರು, ರಾಜ್ಯ ನೌಕರರ ಸಂಘ ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸುತ್ತ ಬರುತ್ತಿದ್ದರೂ ನಮ್ಮ ಮನವಿಗೆ ಸ್ಪಂದಿಸದ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ. 2017 ರಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ 7ನೇ ವೇತನ ಪರಿಷ್ಕರಣೆಗಾಗಿ ತಂಡವನ್ನ ರಚಿಸಿ ವರದಿಯನ್ನ ಪಡೆದರು. ನೌಕರರಿಗೆ ನ್ಯಾಯ ದೊರಕಲಿಲ್ಲ. ಈಗಲೂ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ನೌಕರರ ಬೇಡಿಕೆಯನ್ನ ಈಗಲಾದರೂ ಕಾರ್ಯರೂಪಕ್ಕೆ ತರಲಿ. ರಾಜ್ಯದಲ್ಲಿರುವ ನೌಕರರ ಸಂಖ್ಯೆಯ ಶೇಕಡ 25ರಷ್ಟು ಖಾಲಿ ಉಳಿದಿದ್ದು ಈ ನೌಕರರ ಕೆಲಸವನ್ನು ಚಕಾರು ಎತ್ತದೆ ಉಳಿದ ನೌಕರರೇ ಸ್ಪಂದಿಸುತ್ತಿದ್ದೇವೆ. ಆದುದರಿಂದ ಈ ಕೂಡಲೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು 2024-25 ರ ಆಯವ್ಯಯದಲ್ಲಿ ಜಾರಿಗೊಳಿಸಲಿ ಎಂದು ಮನವಿ ಮಾಡಿದರು.ರಾಜ್ಯ ನೌಕರರ ಪರಿಸ್ಥಿತಿ ಒತ್ತಡದಲ್ಲಿ ಜೀವಿಸುವಂತಹ ಪರಿಸ್ಥಿತಿ ತಲೆದೂರಿದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಕಾರ್ಯನಿರ್ವಹಿಸುತ್ತಿರುವ ನಮಗೆ ಕೆಲಸದ ಒತ್ತಡ ಅಧಿಕವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಇಷ್ಟೆಲ್ಲಾ ವಾಸ್ತವತೆಯನ್ನು ತಿಳಿದಿದ್ದರೂ ರಾಜ್ಯ ಸರ್ಕಾರ ನಮಗೆ ಸ್ಪಂದಿಸದಿರುವುದು ಬೇಸರದ ಸಂಗತಿ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಮಹೇಶ್ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ದೊಡ್ಡಮ್ಮ ವೃತ್ತದಿಂದ ನೂರಾರು ನೌಕರರು ಮೆರವಣಿಗೆ ಮೂಲಕ ಅನಕೃ ವೃತ್ತಕ್ಕೆ ಧಾವಿಸಿ ಅನಕೃ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶಿಕ್ಷಕರ ಭವನದವರೆಗೆ ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.ಕಾರ್ಯಕ್ರಮದಲ್ಲಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಕುಮಾರ್ ಹನ್ಯಾಳು, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ರಾಜ್ಯ ನೌಕರರ ಸಂಘದ ಅಧ್ಯಕ್ಷ ದಿನೇಶ್, ಗ್ರಾಮೀಣ ನೌಕರರ ಅಧ್ಯಕ್ಷ ಯೋಗರಾಜ್ ಉಪಸ್ಥಿತರಿದ್ದರು.ಅರಕಲಗೂಡು ತಾಲೂಕು ಸರ್ಕಾರಿ ನೌಕರರ ಸಂಘದಿಂದ ನಡೆದ ಶಾಸಕ ಮಂಜು ಅವರಿಗೆ ಸನ್ಮಾನ ಕಾರ್ಯಕ್ರಮ.