ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ನಿವೇಶನ, ಮನೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಪೌರಕಾರ್ಮಿಕರಿಗೆ ನಿವೇಶನ, ಮನೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಲು ಮುಂದಾಗುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ, ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಜತೆ ನೇರ ಸಂವಾದ ನಡೆಸಿ ಬಳಿಕ ಅಧಿಕಾರಿಗಳ ಜತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ನಗರ, ಪಟ್ಟಣ, ಗ್ರಾಮಗಳ ಸ್ವಚ್ಚತೆಗಾಗಿ ಪೌರಕಾರ್ಮಿಕರು ಹಗಲಿರುಳೆನ್ನದೇ, ಯೋಧರು ಗಡಿಯಲ್ಲಿ ಸನ್ನದ್ಧರಾಗಿರುವಂತೆ ದಿನನಿತ್ಯ ಸ್ವಚ್ಚತಾ ಕಾಯಕದಲ್ಲಿ ಅವಿರತವಾಗಿ ತೊಡಗುತ್ತಾರೆ. ಅವರ ಆರೋಗ್ಯ ಸುರಕ್ಷತೆಗೆ ಹೆಚ್ಚಿನ ಅದ್ಯತೆ ನೀಡಬೇಕು. ಸರ್ಕಾರ ಪೌರಕಾರ್ಮಿಕರ ಪರವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಚತಾ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳುತ್ತಿದ್ದು, ಈ ಜಿಲ್ಲೆಗೂ ಪ್ರವಾಸ ಕೈಗೊಂಡಿದ್ದೇನೆ. ಪೌರಕಾರ್ಮಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಹೇಳಿಕೊಳ್ಳಬೇಕು. ತಮ್ಮ ಸಮಸ್ಯೆ, ಕುಂದುಕೊರತೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರವಾಗಿ ಆಗಬೇಕು. ಖಾಯಂ ಪ್ರಕ್ರಿಯೆ ಈಗಾಗಲೇ ತಡವಾಗಿದ್ದು, ಅಧಿಕಾರಿಗಳ ಈ ವಿಳಂಬ ಧೋರಣೆಯನ್ನು ಸಹಿಸುವುದಿಲ್ಲ. ಹೊರಗುತ್ತಿಗೆ ಪದ್ದತಿಯನ್ನು ತೆಗೆದುಹಾಕಿ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಅದಷ್ಟು ಬೇಗನೆ ಪ್ರಕ್ರಿಯೆ ಪೂರ್ಣಗೊಳಿಸಿ ನೇಮಕಾತಿ ಮಾಡಿಕೊಳ್ಳಬೇಕು ತಪ್ಪಿದಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಾಕೀತು ಮಾಡಿದರು.

ಗೃಹಭಾಗ್ಯ ಯೋಜನೆಯಡಿ ಯಳಂದೂರು ಪಟ್ಟಣ ಪಂಚಾಯಿತಿ ಹಾಗೂ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಗುಂಪುಮನೆಗಳ ನಿರ್ಮಾಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ. ಮಳೆ ಬಂದರೆ ಮನೆಗಳು ಸೋರುವುದು ಗಮನಕ್ಕೆ ಬಂದಿದೆ. ಕಾಮಗಾರಿ ಪರೀಶೀಲನೆ ನಡೆಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಮನೆ ಕಾಮಗಾರಿ ಸಂಪೂರ್ಣವಾಗಿ ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ನಿವೇಶನ, ಮನೆ ಇಲ್ಲದ ಪೌರಕಾರ್ಮಿಕರಿಗೆ ಮನೆ, ನಿವೇಶನ ನೀಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಜಾಗ ಗುರುತಿಸುವ ಕೆಲಸ ಶೀಘ್ರವಾಗಿ ಆಗಬೇಕು ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ನಿಯಮಿತವಾಗಿ ಬೆಳಗಿನ ಉಪಹಾರ ನೀಡಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಪ್ರತಿತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ಇ.ಎಸ್.ಐ, ಪಿ.ಎಫ್ ಕಡ್ಡಾಯವಾಗಿ ಕಟಾವಣೆಯಾಗಬೇಕು. ಸರ್ಕಾರದ ನಿಗದಿಪಡಿಸಿರುವಂತೆ ಕನಿಷ್ಠವೇತನ ಪಾವತಿಸುತ್ತಿರುವ ಬಗ್ಗೆ ಆನ್‌ಲೈನ್ ಮೂಲಕ ಎಲ್ಲಾ ಏಜೆನ್ಸಿಗಳ ಸಭೆ ಕರೆದು ಕ್ರಮ ವಹಿಸಬೇಕು. ವೇತನ ಪಾವತಿ ಸಂಬಂಧ ಪೌರಕಾರ್ಮಿಕರಿಗೆ ಮೊಬೈಲ್‌ನಲ್ಲಿಯೇ ಸಂದೇಶ ಬರುವಂತಾಗಬೇಕು. ಇಎಸ್‌ಐ, ಪಿಎಫ್ ಅಧಿಕಾರಿಗಳೊಂದಿಗೆ ಕಾರ್ಮಿಕ ಅಧಿಕಾರಿಗಳು ಸಮನ್ವಯ ಸಾಧಿಸಿ ಕ್ಷೇತ್ರಪ್ರವಾಸ ಮಾಡಲು ಮುಂದಾಗಬೇಕು ಎಂದರು.

ಪೌರಕಾರ್ಮಿಕರ ಒತ್ತಡ ನಿವಾರಿಸಲು ಅಗತ್ಯವಿರುವೆಡೆ ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳಬೇಕು. ಸಂಕಷ್ಟ ಭತ್ಯೆ ನೀಡಬೇಕು. ನಿವೃತ್ತರಾದ ಪೌರಕಾರ್ಮಿಕರಿಗೆ ಉಪಧನ ನೀಡಬೇಕು. ಮಲೀನ ನೀರು ಶುದ್ಧೀಕರಣ ಘಟಕದಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಆರೋಗ್ಯ ಸುರಕ್ಷತಾ ಪರಿಕರಗಳನ್ನು ನೀಡಬೇಕು. ನಿಗದಿತ ಕೆಲಸಕ್ಕೆ ನಿಯೋಜಿತರಾದ ಪೌರಕಾರ್ಮಿಕರಿಗೆ ಬದಲಿ ಕೆಲಸ ವಹಿಸಬಾರದು. ಪೌರಕಾರ್ಮಿಕರಿಗೆ ವಿಮೆ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯರಾದ ಶಂಕರ ಅಂಕನಶೆಟ್ಟಿಪುರ, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು, ಆಯೋಗದ ಉಪನಿರ್ದೇಶಕ ಮಹದೇವಸ್ವಾಮಿ, ಸದಸ್ಯರಾದ ಡಿ.ಆರ್.ರಾಜು, ಗಂಗರಾಜು ಇತರರು ಹಾಜರಿದ್ದರು.