ಕುಷ್ಟಗಿ: ಚುನಾವಣೆ, ವಿವಿಧ ಗಣತಿ ಕಾರ್ಯ ಹಾಗೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸೇರಿದಂತೆ ಸರ್ಕಾರದ ಮಹತ್ವದ ಕಾರ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಗಳಿಕೆ ರಜೆ, ಗೌರವಧನ, ಹಾಜರಾತಿ ಪ್ರಮಾಣಪತ್ರ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕುಷ್ಟಗಿ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಬೀರಪ್ಪ ಕುರಿ, ಶಾಲಾ ಶಿಕ್ಷಣದ ಜತೆಗೆ ಚುನಾವಣೆ, ಜನಗಣತಿ, ಸಾಮಾಜಿಕ ಸಮೀಕ್ಷೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಅನೇಕ ಸರ್ಕಾರಿ ಜವಾಬ್ದಾರಿ ಶಿಕ್ಷಕರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಅವರು ಸಲ್ಲಿಸಿದ ಹೆಚ್ಚುವರಿ ಸೇವೆಗೆ ಸಿಗಬೇಕಾದ ಸೌಲಭ್ಯ ಇನ್ನೂ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಇದುವರೆಗೆ ಗಳಿಕೆ ರಜೆ ಮಂಜೂರಾಗಿಲ್ಲ. ಚುನಾವಣಾ ಆಯೋಗದ ಅತ್ಯಂತ ಮಹತ್ವದ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಶಿಕ್ಷಕರಿಗೆ ತಕ್ಷಣವೇ ಗಳಿಕೆ ರಜೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.

2025ರ ಮೇ ತಿಂಗಳಲ್ಲಿ ನಡೆದ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಗಣತಿ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ ಹಾಜರಾತಿ ಪ್ರಮಾಣಪತ್ರ ನೀಡುವುದರ ಜತೆಗೆ ಗಳಿಕೆ ರಜೆ ಮಂಜೂರು ಮಾಡಬೇಕು. ಈ ಕಾರ್ಯ ಸಾಮಾನ್ಯ ಕರ್ತವ್ಯಗಳಲ್ಲದೆ ಹೆಚ್ಚುವರಿ ಜವಾಬ್ದಾರಿಗಳಾಗಿದ್ದು, ಅವುಗಳಿಗೆ ಸೂಕ್ತ ಮಾನ್ಯತೆ ದೊರೆಯಬೇಕು ಎಂದು ಹೇಳಿದರು.

2026ರ ಏಪ್ರಿಲ್‌ನಲ್ಲಿ ನಡೆದ ಭಾರತ ಜನಗಣತಿಯ ಮನೆಪಟ್ಟಿ (ಹೌಸ್ ಲಿಸ್ಟಿಂಗ್) ಕಾರ್ಯದಲ್ಲಿ ಪಾಲ್ಗೊಂಡ ಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ ಸರ್ಕಾರ ಘೋಷಿಸಿರುವ ಗೌರವಧನ ಕೂಡಲೇ ಬಿಡುಗಡೆ ಮಾಡಬೇಕು. ಜತೆಗೆ ಹಾಜರಾತಿ ಪ್ರಮಾಣಪತ್ರ ಮತ್ತು ಗಳಿಕೆ ರಜೆ ನೀಡುವ ಮೂಲಕ ಅವರ ಸೇವೆ ಗೌರವಿಸಬೇಕು ಎಂದು ತಿಳಿಸಿದರು.


ಪ್ರಸ್ತುತ ಭಾರತ ಚುನಾವಣಾ ಆಯೋಗದ ಮಹತ್ವಾಕಾಂಕ್ಷಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ನಡೆಯುತ್ತಿದ್ದು, ಈ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರ ಮೇಲೆ ಅನಗತ್ಯ ಒತ್ತಡ ಹೇರಬಾರದು. ನಿಗದಿತ ಆ.8ರೊಳಗೆ ಕಾರ್ಯ ಪೂರ್ಣಗೊಳಿಸಲು ಅಗತ್ಯ ಸೌಲಭ್ಯ, ತಾಂತ್ರಿಕ ನೆರವು ಹಾಗೂ ಆಡಳಿತಾತ್ಮಕ ಸಹಕಾರ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

ಎಸ್‌ಐಆರ್ ಕಾರ್ಯದಲ್ಲಿ ಸಮಸ್ಯೆಗಳು ಎದುರಾದರೆ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹರಿಸಬೇಕು. ತಾಂತ್ರಿಕ ದೋಷಗಳಿಂದ ಶಿಕ್ಷಕರು ಅನಗತ್ಯ ಒತ್ತಡಕ್ಕೆ ಒಳಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ಶಿಕ್ಷಕರ ಬೇಡಿಕೆ ತರಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಿಂಗಪ್ಪ ಗುನ್ನಾಳ, ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೋರೆ, ಉಪಾಧ್ಯಕ್ಷ ರುದ್ರೇಶ ಬೂದಿಹಾಳ, ವಿಜಯಲಕ್ಷ್ಮಿ ಹಿರೇಮಠ, ಕೋಶಾಧ್ಯಕ್ಷ ಮಹೇಶ ಪಡಿ, ಸಹಕಾರ್ಯದರ್ಶಿ ಅಯ್ಯಪ್ಪ ಸುರುಳ, ಪ್ರಭಾವತಿ ಮಾಳಗಿ, ಸಂಘಟನಾ ಕಾರ್ಯದರ್ಶಿ ಶರಣಪ್ಪ ತೆಮ್ಮಿನಾಳ, ಗಿರಿಜಾ ದೇಸಾಯಿನಿ, ನಿರ್ದೇಶಕ ಇಮಾಮಸಾಬ್‌ ಮುಲ್ಲಾ, ನಾಗರಾಜ ಚನ್ನಪ್ಪನವರ, ಚಂದಪ್ಪ ನಿಡಗುಂದಿ, ಯಮನೂರಪ್ಪ ಮುಂದಲಮನಿ, ಮ್ಯಾಗ್ಡಲಿನಾ ಹಾಗೂ ಶಿಕ್ಷಕರಾದ ಅಮರೇಗೌಡ ಸಣ್ಣಿಂಗಪ್ಪನವರ, ಗುಂಡಪ್ಪ ವಾರಿಕಲ್‌, ಮಲ್ಲಿಕಾರ್ಜುನ ಹಿರೇಮಠ ಸೇರಿದಂತೆ ಅನೇಕರು ಇದ್ದರು.