ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು

ಕನ್ನಡಪ್ರಭ ವಾರ್ತೆ ಮಧುಗಿರಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರಾದ ದೊಡ್ಡಹೊಸಹಳ್ಳಿ ನರಸಿಂಹಮೂರ್ತಿ, ಸಂಜೀವಮೂರ್ತಿ, ದೊಡ್ಡೇರಿ ಕಣಿಮಯ್ಯ, ಎಸ್.ಆರ್. ರಂಗನಾಥ್, ಜೀವಿಕಾ ಮಂಜುನಾಥ್ ಮತ್ತು ಎಂ.ವೈ. ಶಿವಕುಮಾರ್ ಒತ್ತಾಯಿಸಿದರು.

ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ನಿವೇಶನ ಹಂಚಿಕೆ, ಮೂಲಭೂತ ಸೌಕರ್ಯ, ಸ್ಮಶಾನ ಜಮೀನು, ಪೌರಕಾರ್ಮಿಕರ ಕೆಲಸದ ಅವಧಿ, ವೇತನ, ಸುರಕ್ಷತಾ ಪರಿಕರಗಳು, ದಲಿತರ ಜಮೀನುಗಳ ದಾಖಲೆ ದುರಸ್ತಿ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ನಂದಿನಿ, ಸರ್ಕಾರಿ ಜಾಗ ಗುರುತಿಸುವುದು, ಭೂ ಪರಿವರ್ತನೆ ಪ್ರಕ್ರಿಯೆ ನಡೆಸಿ ಗೋಮಾಳ ಜಮೀನನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವುದು ಕಂದಾಯ ಇಲಾಖೆಯ ಜವಾಬ್ದಾರಿ. ನಂತರ ಬಡಾವಣೆಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಗ್ರಾಪಂಗಳ ಹೊಣೆಗಾರಿಕೆ ಎಂದು ತಿಳಿಸಿ, ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 23 ನಿವೇಶನ ಬಡಾವಣೆಗಳ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಕೆಡಿಪಿ ಸಭೆಯಲ್ಲಿ ಶಾಸಕರ ಗಮನಕ್ಕೆ ತಂದು ಅಗತ್ಯ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ದೊಡ್ಡೇರಿ ಗ್ರಾಮಗಳಲ್ಲಿ ರುದ್ರಭೂಮಿಗಾಗಿ ಮೀಸಲಿಟ್ಟಿರುವ ಜಮೀನುಗಳು ಅಂತ್ಯಸಂಸ್ಕಾರಕ್ಕೆ ಯೋಗ್ಯವಾಗಿಲ್ಲ. ಬಂಡೆಗಳಿಂದ ಕೂಡಿರುವ ಜಾಗದಲ್ಲಿ ಗುಂಡಿ ತೆಗೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಮೃತದೇಹಗಳ ಅಂತ್ಯಸಂಸ್ಕಾರ ನಡೆಸಲು ಸೂಕ್ತ ಸ್ಥಳಾವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಸ್ಮಶಾನದಂತಹ ಮೂಲಭೂತ ಅಗತ್ಯಕ್ಕೂ ರಾಜಕೀಯ ಮಾಡದೆ, ಸಮತಟ್ಟಾದ ಸೂಕ್ತ ಜಮೀನು ಗುರುತಿಸಿ ಒದಗಿಸಬೇಕು ಎಂದು ಒತ್ತಾಯಿಸಿದರು.

ದಸಂಸ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ತಾಲೂಕಿನಲ್ಲಿ ಅಂಬೇಡ್ಕರ್ ಭವನಗಳು ಹಾಳುಬೀಳುತ್ತಿವೆ. ಭವನಕ್ಕೆ ಸುಣ್ಣ-ಬಣ್ಣ ಬಳಿದು ದಶಕಗಳೇ ಕಳೆದಿವೆ. ನಿರ್ವಹಣೆಗೆ ಕ್ರಮ ಕೈಗೊಳ್ಳಿ ಎಂದು ಹಲವು ಬಾರಿ ಪುರಸಭೆಗೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಇನ್ನಾದರೂ ಭವನದ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನದ ಕಟ್ಟಡಗಳಿವೆ.

ಆದರೆ, ಉಪ ವಿಭಾಗ ಹಾಗೂ ತಾಲೂಕು ಕೇಂದ್ರವಾದ ಮಧುಗಿರಿಯಲ್ಲಿ ಬಡವರು ಮತ್ತು ದಲಿತರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಕಟ್ಟಡವಿಲ್ಲ. ಹಾಗಾಗಿ ಪಟ್ಟಣದ ಹೊರಭಾಗದಲ್ಲಿ ಐದು ಎಕರೆ ಜಾಗ ಗುರುತಿಸಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿದರೆ ಬಡವರು ಹಾಗೂ ದಲಿತರಿಗೆ ಅನುಕೂಲವಾಗುತ್ತದೆ ಎಂದು ದೊಡ್ಡೇರಿ ಕಣಿಮಯ್ಯ ಆಗ್ರಹಿಸಿದರು.

ಈ ಸಭೆಯಲ್ಲಿ ತಹಸೀಲ್ದಾರ್ ನಂದಿನಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪಿಎಸ್‌ಐ ಚಂದ್ರಶೇಖರ್, ಸಮಾಜ ಕಲ್ಯಾಣ ಅಧಿಕಾರಿ ದಿನೇಶ್, ಬಿಇಒ ನರಸಿಂಹಮೂರ್ತಿ ಹಾಗೂ ದಲಿತ ಮುಖಂಡರಾದ ಗಂಗಾಧರ ತಿಪ್ಪಾಪುರ, ಶ್ರೀರಾಮ್, ಮೈಲಾರಪ್ಪ, ಜೀವಿಕಾ ಮಂಜು, ಜೀವಿಕಾ ಸಂಜೀವಮೂರ್ತಿ, ಸಿದ್ದಾಪುರ ರಂಗನಾಥ್ ಉಪಸ್ಥಿತರಿದ್ದರು.