ಸಮೂಹ ಏತ ನೀರಾವರಿ ಯೋಜನೆಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಸಮೂಹ ಏತ ನೀರಾವರಿ ಯೋಜನೆಗಳಿಗೆ ಉಚಿತ ವಿದ್ಯುತ್ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ ಹೇಳಿದರು.ತಾಲೂಕಿನ ಶೇಡಬಾಳ ಗ್ರಾಮದಲ್ಲಿ ಯುವ ಮುಖಂಡ ರಮೇಶ ಚೌಗುಲಾ ನೇತೃತ್ವದಲ್ಲಿ ವರದ ಏತ ನೀರಾವರಿ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ 10 ಎಚ್‌ಪಿಯವರೆಗೆ ಉಚಿತ ವಿದ್ಯುತ್ ನೀಡಿದೆಯೋ ಹಾಗೆ ಸಮೂಹ ಏತ ನೀರಾವರಿ ಯೋಜನೆಗಳಿಗೂ ಉಚಿತ ವಿದ್ಯುತ್ ನೀಡಿದಾಗ ಮಾತ್ರ ರೈತರು ಬದುಕುಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ನನ್ನ ಸಹೋದರ ಶಾಸಕ ರಾಜು ಕಾಗೆಯವರು ಹಲವಾರು ವರ್ಷಗಳಿಂದ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದರೂ ಇನ್ನೂವರೆಗೆ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ತಿಳಿಸಿದರು. ಸಮೂಹ ಏತ ನೀರಾವರಿ ಯೋಜನೆಗಳು ಉತ್ತರ ಕರ್ನಾಟಕದಲ್ಲಿ ಮಾತ್ರ ಇದ್ದು, ದಕ್ಷಿಣ ಕರ್ನಾಟಕ ಮತ್ತಿತರ ಕಡೆಗಳಲ್ಲಿಲ್ಲ. ದೂರದ ಕೃಷ್ಣಾ ನದಿಯಿಂದ ಹಲವಾರು ರೈತರು ಒಂದುಗೂಡಿ ಸಮೂಹ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡು ಬಂದವರಿಗೆ ಕೋಟ್ಯಂತರ ವಿದ್ಯುತ್ ಬಿಲ್ ಬಂದಿರುವುದರಿಂದ ಬಿಲ್ ತುಂಬಲು ಆಗದೆ ಅದೇಷ್ಟೋ ಯೋಜನೆಗಳು ಬಂದ್ ಬಿದ್ದಿವೆ ಎಂದು ಕಳವಳ ವ್ಯಕ್ತಪಡಿಸಿದರು.ಗ್ರಾಮೀಣ ಭಾಗದ ರೈತರು ಐದಾರು ಕಿಮೀ ದೂರದಿಂದ ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡು ಬಂದು ಹಲವಾರು ಬೆಳೆಗಳನ್ನು ಬೆಳೆದರೂ ಸಹ ಅವರ ಬೆಳೆಗಳಿಗೆ ಬೆಂಬಲ ಬೆಲೆ ಸಿಗದೇ ಇರುವುದಿಂದ ರೈತರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದೆ ಬಂದು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದರು.ಮಹಿಷಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ರೈತರು ಹೆಚ್ಚಿನ ಲಾಭಕ್ಕಾಗಿ ಭೂತಾಯಿಗೆ ಕೀಟನಾಶಕ, ಔಷಧಿಗಳು, ರಾಸಾಯನಿಕ ಗೊಬ್ಬರದ ಬಳಿಕೆ ಮಾಡಿ ಭೂಮಿಗೆ ನಾವು ವಿಷ ಉಣಿಸುತ್ತಿದ್ದೇವೆ. ಇದರಿಂದ ಭೂಮಿಯ ಜೀವಸತ್ವಗಳು ಕಡಿಮೆಯಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸಿ ಆದಾಯವೂ ಕಡಿಮೆಯಾಗುತ್ತದೆ. ಇದಕ್ಕೆ ಮೂಲ ಕಾರಣ ವಿಷಪೂರಿತ ರಾಸಾಯನಿಕ ರಸಗೊಬ್ಬರ. ಅದಕ್ಕಾಗಿ ತಾವೆಲ್ಲರು ಗೋವುಗಳನ್ನು ಸಾಕಿ ಸಾವಯವ ಬೆಳೆಗಳನ್ನು ಬೆಳೆದು ಆರೋಗ್ಯವನ್ನು ಕಾಯ್ದುಕೊಳ್ಳುವಂತೆ ತಿಳಿಸಿದರು.ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಜೀತ ಚೌಗುಲೆ, ರವೀಂದ್ರ ಪೂಜಾರಿ ಮುಖಂಡರಾದ ರಮೇಶ ಚೌಗುಲಾ, ಅರುಣ ಫರಾಂಡೆ, ಜ್ಯೋತಿಕುಮಾರ ಪಾಟೀಲ, ಉತ್ಕರ್ಷ ಪಾಟೀಲ, ಬಾಬಾಸಾಬ ನಾಂದ್ರೆ, ಪ್ರಕಾಶ ಪಾಟೀಲ, ಮುರಘೇಶ ತ್ರಿಕಾಣಿ, ರಾಜಾರಾಮ ಗಡಗೆ, ವಸಂತ ಖೋತ, ಮುಕುಂದ ಪೂಜಾರಿ, ನಾಥಗೌಡ ಪಾಟೀಲ, ಎಂ.ಎ.ಗಣಿ ಸೇರಿದಂತೆ ನೂರಾರು ರೈತ ಮುಖಂಡರು ಪಾಲ್ಗೊಂಡಿದ್ದರು.ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ ರೈತರು ತಮ್ಮ ಭೂಮಿಗಳನ್ನು ಬ್ಯಾಂಕ್‌ಗಳಿಗೆ ಅಡವಿಟ್ಟು ಸಮೂಹ ಏತ ನೀರಾವರಿ ಯೋಜನೆಗಳನ್ನು ಮಾಡಿಕೊಂಡಿದ್ದು, ಇಂತಹ ಏತ ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿ ಸಹಾಯಧನ ವಿತರಿಸಬೇಕು. ಕೃಷ್ಣಾ ನದಿಯಿಂದ ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಐದಾರು ಕಿಮೀ ದೂರದ ಕೃಷ್ಣಾ ನದಿಯಿಂದ ಏತ ನೀರಾವರಿ ಮಾಡಿ ಕೃಷಿಗೆ ಆದ್ಯತೆ ನೀಡಿರುವುದು ಶ್ಲಾಘನೀಯ
-ಡಾ.ಸಿದ್ದಗೌಡ ಕಾಗೆ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು.