ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ನಾಮಕೆವಾಸ್ತೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದ್ದಾರೆ. ಇದು ಹೋರಾಟವನ್ನು ದಿಕ್ಕು ತಪ್ಪಿಸುವ ತಂತ್ರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ಏನಾದರೂ ಅಭಿವೃದ್ಧಿ ಕಾರ್ಯಗಳು ಆಗಿದ್ದರೆ ಅದು ಹೋರಾಟಗಳಿಂದ ಆಗಿದೆ. ಜಿಲ್ಲೆಯ ಹೋರಾಟಗಾರರು ವೈದ್ಯಕೀಯ ಕಾಲೇಜ್ ಹೋರಾಟವನ್ನು ಕೈಗೆತ್ತಿಕೊಂಡಾಗ ಬಿಜೆಪಿಯು ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ಸಮಿತಿಯ 21 ಜನ ಹೋರಾಟಗಾರರಿಗೆ ಜಾಮೀನು ಸಿಕ್ಕ ಹಿನ್ನೆಲೆ ಹೋರಾಟಗಾರರಿಗೆ ಹಾಗೂ ಜಮೀನು ನೀಡಿದ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳಗೆ ಸನ್ಮಾನಿಸಿ ಅವರು ಮಾತನಾಡಿದರು. ಹೋರಾಟಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ನಾಮಕೆವಾಸ್ತೆ ಮೆಡಿಕಲ್ ಕಾಲೇಜ್ ಘೋಷಣೆ ಮಾಡಿದ್ದಾರೆ. ಇದು ಹೋರಾಟವನ್ನು ದಿಕ್ಕು ತಪ್ಪಿಸುವ ತಂತ್ರ. ಮುಖ್ಯಮಂತ್ರಿಗಳು ಮತ್ತು ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಜನ ನೀಡಿದ ಅಧಿಕಾರದ ಋಣ ತೀರಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿ ಹೋರಾಟಗಾರರಾದ ಗಿರೀಶ ಕಲಘಟಗಿ, ಲಾಯಪ್ಪ ಇಂಗಳೆ ಮಾತನಾಡಿ, ವೈದ್ಯಕೀಯ ಮಹಾವಿದ್ಯಾಲಯ ಹೋರಾಟವು ಜನರ ಹೋರಾಟವಾಗಿದ್ದು ಜಿಲ್ಲೆಯ ಜನ ತನು ಮನ ಧನದಿಂದ ಸಹಾಯ ಸಹಕಾರ ಮಾಡಿದ್ದಕ್ಕೆ ಹೋರಾಟ ಯಶಸ್ವಿ ಆಗಿದೆ. ಈ ಹೋರಾಟದ ಗೆಲವು ಜನರ ಗೆಲುವು ಎಂದು ಹೇಳಿದರು. ಹಿರಿಯ ಹೋರಾಟಗಾರರಾದ ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಕೆಂಗನಾಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ವೇಳೆ ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬಿಜೆಪಿ ಮುಖಂಡ ಉಮೇಶ ಕಾರಜೋಳ, ಜಾಮೀನು ಪಡೆದ ಹೋರಾಟಗಾರರಾದ ವಿನೋದ ಖೇಡ, ಭರತಕುಮಾರ.ಎಚ್.ಟಿ, ಮಲ್ಲಿಕಾರ್ಜುನ.ಎಚ್.ಟಿ, ಸಿದ್ದಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಕಾವೇರಿ ರಜಪೂತ, ಮಲ್ಲಿಕಾರ್ಜುನ ಬಟಗಿ, ಜಗದೇವ ಸೂರ್ಯವಂಶಿ, ಭೋಗೇಶ ಸೋಲಾಪುರ, ಲಕ್ಷ್ಮಣ ಕಂಬಾಗಿ ಸೇರಿದಂತೆ ಅನೇಕರಿದ್ದರು.