ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಅಸಂಘಟಿತ ಕೆಲಸಗಾರರಿಗೆ ಸಿಗುವಂತಾಗಬೇಕು ಎಂದು ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ ರಾಜ್ಯ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ ಒತ್ತಾಯಿಸಿದರು.
ಹಾವೇರಿ: ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಅಸಂಘಟಿತ ಕೆಲಸಗಾರರಿಗೆ ಸಿಗುತ್ತಿಲ್ಲ. ಅಸಂಘಟಿತ ಕೆಲಸಗಾರರು ಶೇ. 72ರಷ್ಟು ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ್ದಾರೆ. ಸರ್ಕಾರ ಈ ಕೂಡಲೇ ಹೆರಿಗೆ ಭತ್ಯೆ, ಇಎಸ್‌ಐ ಸೌಲಭ್ಯ, ಪಿಂಚಣಿ ಸೌಲಭ್ಯ ಇತ್ಯಾದಿಗಳನ್ನು ಈಡೇರಿಸಬೇಕೆಂದು ಕರ್ನಾಟಕ ವ್ಯವಸಾಯ ಕೂಲಿ ವೃತ್ತಿಪರ ಯೂನಿಯನ್ ರಾಜ್ಯ ಕಾರ್ಯದರ್ಶಿ ಕಾಮಾಕ್ಷಿ ರೇವಣಕರ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇಶದ ಒಟ್ಟು ಕೆಲಸದ ಶೇ. 93ರಷ್ಟು ಅಸಂಘಟಿತ ಕೆಲಸಗಾರರು ದೇಶದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಬಹುತೇಕ ಕೆಲಸಗಾರರು ದಿನಕ್ಕೆ ₹100 ಪಡೆಯುತ್ತಿದ್ದಾರೆ. ದೇಶದಲ್ಲಿ 500 ದಶಲಕ್ಷ ಜನಸಂಖ್ಯೆ ಅಸಂಘಟಿತ ಕಾರ್ಮಿಕರಿದ್ದಾರೆ. ಈ ಕಾರ್ಮಿಕರಿಗೆ ಯಾವುದೇ ಜೀವನ ಭದ್ರತೆಯಾಗಲಿ, ಸಾಮಾಜಿಕ ರಕ್ಷಣೆಯಾಗಲಿ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರ ದೇಶದಲ್ಲಿರುವ ಅಸಂಘಟಿತ ಕಾರ್ಮಿಕರನ್ನು 16 ಕಾರ್ಮಿಕ ಕಲ್ಯಾಣ ಕಾನೂನುಗಳಲ್ಲಿ ಸಾಮಾಜಿಕ ಭದ್ರತೆಯೊಂದಿಗೆ ವಿಲೀನಗೊಳಿಸುವ ಕಾರ್ಮಿಕ ಕೋಡ್‌ನ್ನು ಯೋಚಿಸುತ್ತಿದೆ. ಇದನ್ನು ಹೊರತುಪಡಿಸಿಯೂ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರಮುಖವಾಗಿ ನಮಗೆ ₹50 ಸಾವಿರ ಹೆರಿಗೆ ಭತ್ಯೆ ಪರಿಹಾರ ನೀಡಬೇಕು. ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. 50 ವರ್ಷ ಪೂರ್ಣಗೊಂಡ ಮಹಿಳೆಯರಿಗೆ ಮಾಸಿಕ ₹5 ಸಾವಿರ ಪಿಂಚಣಿ ನೀಡಬೇಕು. ಅಂಗವೈಕಲ್ಯಕ್ಕೆ ಮತ್ತು ಸಾವಿಗೆ ಕನಿಷ್ಠ ಪರಿಹಾರವಾಗಿ ₹10 ಲಕ್ಷ ಪರಿಹಾರ ಘೋಷಣೆ ಮಾಡಬೇಕು. ಎಸ್ಸಿ, ಎಸ್ಟಿ ಇತರೆ ಭೂರಹಿತ ಜನಾಂಗದವರಿಗೆ ಯಾವುದೇ ಭೂಮಿಯನ್ನು ನೀಡಿಲ್ಲ, ಕನಿಷ್ಠ 2 ಎಕರೆ ಭೂಮಿ ನೀಡಬೇಕು. 30 ವರ್ಷಗಳಿಂದ ವಾಸ ಮಾಡುತ್ತಿರುವ ಮನೆಗಳಿಗೆ ಪಟ್ಟಾ ನೀಡಿಲ್ಲ, ಅಂತಹವರಿಗೆ ಪಟ್ಟಾ ನೀಡಿ ಈ ಸ್ವತ್ತು ಉತಾರ ಸೌಲಭ್ಯ ಒದಗಿಸಬೇಕು. ಜತೆ ಉದ್ಯೋಗ ಖಾತರಿ ಹಣ ಸುಮಾರು 5 ತಿಂಗಳಿನಿಂದ ಪಾವತಿಯಾಗಿಲ್ಲ. ಈ ಕೂಡಲೇ ಬಾಕಿ ಇರುವ ಹಣ ಪಾವತಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ವಿ.ವಿ.ಯು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನವೀನ ಹುಲ್ಲತ್ತಿ, ನಾಗರಾಜ ಮಳ್ಳೂರ, ಶ್ವೇತಾ ಚನ್ನಗೌಡ್ರ, ನಿರ್ಮಲಾ ಚನ್ನಳ್ಳಿ ಇದ್ದರು.