ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿ: ಎಆರ್‌ಕೆ

| Published : Mar 22 2025, 02:05 AM IST

ಸಾರಾಂಶ

ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಯೋಜನೆಗಳ ಜಾರಿಗೆ ಕುರಿತು ಸದನದಲ್ಲಿ ಎಆರ್ ಕೃಷ್ಣಮೂರ್ತಿ ಪ್ರಸ್ತಾಪಿಸಿ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ರೈತರ ಅಭ್ಯುದಯಕ್ಕಾಗಿ ಸರ್ಕಾರ ₹505 ಕೋಟಿಯ ಪೈಲಟ್ ಪ್ರಾಜೆಕ್ಟ್ ಯೋಜನೆಗೆ ಆದ್ಯತೆ ನೀಡುವ ಮೂಲಕ ಜಿಲ್ಲೆಯ ರೈತರ ಹಿತ ಕಾಯಬೇಕು, ಉಪ ಮುಖ್ಯಮಂತ್ರಿಗಳ ಭರವಸೆಯಂತೆ ಎಚ್‌ಡಿ ಕೋಟೆಯಿಂದ 8 ಕ್ಷೇತ್ರಗಳ ಮೂಲಕ ಹಾದು ಬರುವ ಈ ಯೋಜನೆಗೆ ₹800 ಕೋಟಿ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸದನದಲ್ಲಿ ಆಗ್ರಹಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಕುರಿತು ತಮ್ಮ 12 ನಿಮಿಷಗಳ ಭಾಷಣದ ವೇಳೆ ಕೊಳ್ಳೇಗಾಲ ಕ್ಷೇತ್ರ ಮಾತ್ರವಲ್ಲ, ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತ ಯೋಜನೆ ಜಾರಿಗೆ ಸರ್ಕಾರವನ್ನು ಆಗ್ರಹಿಸಿದರು. ಇತ್ತೀಚೆಗೆ ಸಿಎಂ ಮಂಡಿಸಿದ ಬಜೆಟ್‌ನಲ್ಲಿ ಚಾ.ನಗರ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ, ಹಾಗಾಗಿ ಜಿಲ್ಲಾಭಿವೃದ್ಧಿಗೆ ಯೋಜನೆ ಜಾರಿಗೆ ಆದ್ಯತೆ ನೀಡುವಂತೆ ಸದನದಲ್ಲಿ ಶಾಸಕರು ಮನವಿ ಮಾಡಿದರು. ರೇಷ್ಮೆ ನಗರ ವೈಭವ ಮರುಕಳಿಸಲಿ: ಚಾ.ನಗರ ಗಡಿ ಜಿಲ್ಲೆಯಾಗಿದ್ದು ನಂಜುಂಡಪ್ಪ ವರದಿ ಗಮನಿದರೆ ಇದೊಂದು ಹಿಂದುಳಿದ ಜಿಲ್ಲೆಯಾಗಿದ್ದು ಈ ಭಾಗದ ಜಿಲ್ಲೆಯ ರೈತಾಪಿ ವರ್ಗಕ್ಕೆ ನ್ಯಾಯ ಸಲ್ಲಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಿ ರೈತಾಪಿ ವರ್ಗಗಳ ಹಿತ ಕಾಯಬೇಕು, ಆ ಮೂಲಕ ₹800 ಕೋಟಿ ಈ ಯೋಜನೆಗೆ ಒದಗಿಸಬೇಕು. ಪೈಲಟ್ ಪ್ರಾಜೆಕ್ಟ್‌ ಗೆ ₹505 ಕೋಟಿಗಳಿಗೆ ಆದ್ಯತೆ ನೀಡಬೇಕು. ಮ.ಬೆಟ್ಟದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಬೇಕೆಂಬ ಬಯಕೆ ನನ್ನಗಾಗಿತ್ತು. ಆದರೆ ಸಭೆ ಮುಂದೂಡಿದ ಕಾರಣ ಈ ಬಯಕೆ ಈಡೇರಲಿಲ್ಲ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರಲ್ಲದೆ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದಿದ್ದ ರೇಷ್ಮೆ ನಗರಿ ವೈಭವ ಮತ್ತೆ ಮರುಕಳಿಸಬೇಕು. ರೇಷ್ಮೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಆಗ್ರಹಿಸಿದರು. ರೇಷ್ಮೆ ಬಿಚ್ಚಣಿಕೆದಾರ ರೈತರಿಗೆ ₹1 ಕೋಟಿ, ₹2 ಕೋಟಿ ಪ್ರೋತ್ಸಾಹ ಧನ ನೀಡುವ ಕುರಿತು ಸದನದಲ್ಲಿ ಪ್ರಸ್ತಾಪಿಸಿದರು.

ಕುಪ್ಪಮ್ಮ ಕಾಲುವೆ ಅಭಿವೃದ್ಧಿಗೆ, 3 ಕಡೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ:

ಚಾ.ನಗರ ವಿವಿ ಉಳಿಸುವ ಮೂಲಕ ಅದಕ್ಕೆ ಡಾ.ಅಂಬೇಡ್ಕರ್ ಹೆಸರನ್ನು ಮರು ನಾಮಕರಣಗೊಳಿಸಬೇಕು. ಕೊಳ್ಳೇಗಾಲದ ಕುಪ್ಪಮ್ಮ ಕಾಲುವೆ ಸಮಗ್ರ ಅಭಿವೃದ್ಧಿಯಾಗಬೇಕು, ಅಲ್ಲಿನ ಹೂಳು ತೆಗೆಸಿ ಅಭಿವೃದ್ಧಿಗೆ ಮುಂದಾಗುವಂತೆ ಚರ್ಚಿಸಿದರು. ಯಳಂದೂರು, ಕೊಳ್ಳೇಗಾಲದಲ್ಲಿ ಒಳಚಂರಡಿ ವ್ಯವಸ್ಥೆಗೆ ಸಮಗ್ರ ರೀತಿಯಲ್ಲಿ ಕಾಯಕಲ್ಪ ಒದಗಿಸಬೇಕು, ಅದಕ್ಕಾಗಿ ಅನುದಾನ ನಿಗದಿಗೆ ಮತ್ತು ಯಳಂದೂರು, ಬಿಳಿಗಿರಿ ರಂಗನಬೆಟ್ಟ, ಸಂತೇಮರಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಸರ್ಕಾರ ಮುಂದಾಗಬೇಕು, ಸಂತೇಮರಳ್ಳಿ ಎಪಿಎಂಸಿಯಲ್ಲಿ ಎಳನೀರು ಮಾರುಕಟ್ಟೆ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕು, ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು. ಕೆರೆಗಳ ಅಭಿವೃದ್ಧಿಗೆ ಚರ್ಚೆ, ಸದನದಲ್ಲಿ ಗಮನ:

ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಗ್ರ ರೀತಿಯಲ್ಲಿ ಕೆರೆಗಳ ಅಭಿವೃದ್ಧಿಯಾಗಬೇಕು, ಕ್ಷೇತ್ರದ ಕುರುಬನಕಟ್ಟೆ, ಬಿಳಿಗಿರಿ ರಂಗನಬೆಟ್ಟ ಪ್ರವಾಸಿ ತಾಣ ಉತ್ತಮ ರೀತಿ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು, ಆ ಮೂಲಕ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಬೇಕು, ಹೊಂಗನೂರು ಮತ್ತು ನವಿಲೂರಿನಲ್ಲಿ ಕಾಲೇಜು ಪ್ರಾರಂಭ ಆಗಬೇಕು ಎಂದು ವಿಚಾರ ಪ್ರಸ್ತಾಪಿಸಿ ಗಮನ ಸೆಳೆದರು.

ಮುಡಿಗುಂಡ ಸೇತುವೆ ತುರ್ತು ನಿರ್ಮಾಣ ಆಗಲಿ:

ಮುಡಿಗುಂಡ ಸೇತುವೆ 1935ರಲ್ಲಿ ನಿರ್ಮಾಣವಾದ ತೀರಾ ಹಳೆಯದಾದ ಸೇತುವೆ. ಈ ಸೇತುವೆ ಮರು ನಿರ್ಮಾಣಕ್ಕೆ ಸರ್ಕಾರ ತುರ್ತಾಗಿ ಮುಂದಾಗಬೇಕು ಎಂದರು. ಕೊಳ್ಳೇಗಾಲದ ರಾಜಕುಮಾರ್ ರಸ್ತೆ, ಅಂಬೇಡ್ಕರ್ ರಸ್ತೆಗಳ ಅಗಲೀಕರಣವಾಗಬೇಕು, ಅಭಿವೃದ್ಧಿ ದೃಷ್ಟಿಯಿಂದ ನೂರು ಅಡಿ ರಸ್ತೆಗೆ ಸರ್ಕಾರ ಕ್ರಮವಹಿಸಬೇಕು, ಗಿರಿಜನರ ಅಭಿವೃದ್ಧಿಗೆ ಕಿರುಉತ್ಪನ್ನ ಸಂಗ್ರಹಸುವ ಗಿರಿಜನರಿಗೆ ಕಿರು ಅರಣ್ಯ ಉತ್ಪನ್ನಕ್ಕೆ ಲ್ಯಾಪ್ ಸೊಸೈಟ್ ಮೂಲಕ 5 ಲಕ್ಷ ಸಹಾಯಧನ ನೀಡಿದರೆ ಅವರಿಗೆ ಅನುಕೂಲವಾಗಲಿದ್ದು ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಉಪವಿಭಾಗಕ್ಕೊಂದು ಜಿಲ್ಲಾಸ್ಪತ್ರೆ, ಕೊಳ್ಳೇಗಾಲದಲ್ಲಿ ಪ್ರಾರಂಭವಾಗಲಿ:

ಉಪ ವಿಭಾಗಕ್ಕೊಂದು ಜಿಲ್ಲಾಸ್ಪತ್ರೆ ನಿರ್ಮಿಸಿ ಕೊಳ್ಳೇಗಾಲಕ್ಕೆ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಸಮಾಜ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಗಿರಿಜನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸುವಂತೆ, ವಿಕಲಚೇತನರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು, ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್‌ಡಬ್ಲೂ, ವಿಆರ್‌ಡಬ್ಲೂಗಳ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಬಿ.ರಾಚಯ್ಯವರು ಅರಣ್ಯ ಸಚಿವರಾಗಿದ್ದ ವೇಳೆ ಬಡರೈತರಿಗೆ, ಕೃಷಿ ಕಾರ್ಮಿಕರಿಗೆ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ತಲಾ 4 ಎಕರೆ ಜಮೀನು ನೀಡಿದ್ದು ಆ ಪ್ರಕರಣದಲ್ಲಿ ಸರ್ಕಾರ ಡ್ರೋಣ್ ಸರ್ವೆ ಮಾಡಿಸಿ ಎಲ್ಲಾ ವರ್ಗದ ಸಾಗುವಳಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದರು.