ಸ್ತ್ರೀಯರನ್ನು ಆರ್ಥಿಕ ಸಬಲೀಕರಣರನ್ನಾಗಿಸುವುದು ಗೃಹಲಕ್ಷ್ಮೀ ಯೋಜನೆಯ ಉದ್ದೇಶವಾಗಿದ್ದು, 1,23,00,000 ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ.

ಗದಗ: ಬಡ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಾಗೂ ಸ್ವಾವಲಂಬಿಯಾಗಿ ಜೀವನ ನಡೆಸಲು ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿದ್ದು, ಯೋಜನೆಯ ಸೌಲಭ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಲಭಿಸಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವಾದ ನಂತರ ದೇಶದಲ್ಲೇ ಕರ್ನಾಟಕ ರಾಜ್ಯವು ತೆರಿಗೆ ಪಾವತಿಸುವುದರಲ್ಲಿ 2ನೇ ಸ್ಥಾನದಲ್ಲಿದೆ. ಸ್ತ್ರೀಯರನ್ನು ಆರ್ಥಿಕ ಸಬಲೀಕರಣರನ್ನಾಗಿಸುವುದು ಗೃಹಲಕ್ಷ್ಮೀ ಯೋಜನೆಯ ಉದ್ದೇಶವಾಗಿದ್ದು, 1,23,00,000 ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪೋತಿಯಾದವರ ಮನೆ ಯಜಮಾನಿ ಹೆಸರಿನಲ್ಲಿಯೂ ಯೋಜನೆಯ ಹಣ ಖಾತೆಗೆ ಜಮಾ ಆಗಿದ್ದು, ಅಂತಹ ಮರಣ ಹೊಂದಿದವರ ಖಾತೆಗೆ ಜಮಾ ಆದ ಹಣವನ್ನು ವಸೂಲು ಮಾಡಿ ಸರ್ಕಾರಕ್ಕೆ ಮರುಪಾವತಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯೋಜನೆಯ ಸೌಲಭ್ಯದ ದುರುಪಯೋಗವಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದರು.

ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಬಸ್‌ ಸ್ಟ್ಯಾಂಡ್‌ಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ವಿಶ್ರಾಂತಿಗೃಹ ಹಾಗೂ ಶೌಚಾಲಯಗಳಿರುವಂತೆ ಕ್ರಮ ವಹಿಸಬೇಕು. ಪಡಿತರ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬೋರ್ಡ್ ಪ್ರದರ್ಶಿಸಬೇಕು. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಫಲಾನುಭವಿಗಳಿಗೆ ದೊರಕಿಸುವಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.

ಫೆ. 18ರಂದು ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶ ಹಾಗೂ ಫಲಾನುಭವಿಗಳೊಂದಿಗೆ ಚರ್ಚೆ ಸಮಾರಂಭವು ಜರುಗಲಿದೆ. ಸಮಾವೇಶವನ್ನು ಅತ್ಯಂತ ವಿಜೃಂಭಣೆಯಿಂದ ಉತ್ಸವದಂತೆ ಆಚರಿಸಲು ಉದ್ದೇಶಿಸಲಾಗಿದೆ. ಗ್ಯಾರಂಟಿ ಸಮಾವೇಶವು ಅತ್ಯಂತ ವ್ಯವಸ್ಥಿತವಾಗಿ ಜರುಗಲು ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಬೇಕು.

5 ಗ್ಯಾರಂಟಿ ಯೋಜನೆಗಳ ಪ್ರತ್ಯೇಕ ಮಳಿಗೆಗಳನ್ನು ಹಾಕಬೇಕು. ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ, ವೇದಿಕೆ ವ್ಯವಸ್ಥೆ, ಫಲಾನುಭವಿಗಳ ಚರ್ಚೆ, ಊಟೋಪಹಾರದ ವ್ಯವಸ್ಥೆ ಸೇರಿದಂತೆ ಸಮಾವೇಶ ಯಾವುದೇ ಲೋಪದೋಷಗಳಿಲ್ಲದಂತೆ ಅಚ್ಚುಕಟ್ಟಾಗಿ ನಡೆಸಬೇಕೆಂದು ತಿಳಿಸಿದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸೌಲಭ್ಯ ಒದಗಿಸುವುದು ಬಡಜನರ ಸೇವೆಗೆ ಸರ್ಕಾರವು ಒದಗಿಸಿಕೊಟ್ಟ ಅವಕಾಶವಾಗಿದೆ. ಸೌಲಭ್ಯಗಳ ದುರುಪಯೋಗವಾಗದಂತೆ ನಿಗಾ ವಹಿಸುವುದು ಹಾಗೂ ಸೌಲಭ್ಯಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದರು.

ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಯೋಜನೆಗಳ ಸಾಧನೆ ಕುರಿತು ಮಾಹಿತಿ ನೀಡಿದರು. ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ವೀರಯ್ಯ ಮಠಪತಿ, ಡಿ.ಡಿ. ಮರ‍್ನಾಳ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಪಂ ಯೋಜನಾ ನಿರ್ದೇಶಕ ಎಂ.ವಿ. ಚಳಗೇರಿ ಸೇರಿದಂತೆ ಸಮಿತಿ ಸದಸ್ಯರು, ಅಧಿಕಾರಿಗಳು ಇದ್ದರು.