ಹಿಂದೆ ದರಖಾಸ್ತ್ ಪೋಡಿ ಮಾಡಲು ಕನಿಷ್ಠ 5 ದಾಖಲೆಗಳ ಆಗತ್ಯ ಇತ್ತು. ಆದರೆ, ಈಗ 3 ದಾಖಲೆ ಇದ್ದರೆ ಸಾಕು ದರಖಾಸ್ತ್ ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೆ ಅರ್ಜಿದಾರರ ಊರಿಗೆ ಹೋಗಿ ಪರಿಶೀಲನೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡುವ ಮೂಲಕ ಅವರು ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯತ್‌ನ ಕಾವೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಳೆಯಿಂದ ಮನೆ ಹಾನಿಗೊಳಗಾದ ವಿವರಗಳನ್ನು ರಾಜೀವ್‌ಗಾಂಧಿ ಹೌಸಿಂಗ್‌ ಪೋರ್ಟಲ್‌ನಲ್ಲಿ ನಮೂದಿಸಿ ಶೀಘ್ರವೇ ಪರಿಹಾರ ನೀಡಿದರೆ ಅವರು ಮನೆಯನ್ನು ನಿರ್ಮಿಸಿಕೊಳ್ಳುವುದಕ್ಕೆ ಅನುಕೂಲವಾಗಲಿದೆ ಎಂದರು.

ಹಿಂದೆ ದರಖಾಸ್ತ್ ಪೋಡಿ ಮಾಡಲು ಕನಿಷ್ಠ 5 ದಾಖಲೆಗಳ ಆಗತ್ಯ ಇತ್ತು. ಆದರೆ, ಈಗ 3 ದಾಖಲೆ ಇದ್ದರೆ ಸಾಕು ದರಖಾಸ್ತ್ ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೆ ಅರ್ಜಿದಾರರ ಊರಿಗೆ ಹೋಗಿ ಪರಿಶೀಲನೆ ಮಾಡಲಾಗುವುದು. ಯಾವುದೇ ತೊಂದರೆ ಇಲ್ಲದಿದ್ದರೆ ಅವರಿಗೆ ದರಖಾಸ್ತ್ ಪೋಡಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ. ಮುಂದಿನ ಆರು ತಿಂಗಳೊಳಗಾಗಿ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳದೆ ವಿಲೇವಾರಿ ಮಾಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, 2014ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯ ಡೀಮ್ಡ್ ಫಾರೆಸ್ಟ್ ಸರ್ವೇ ಮಾಡಲಾಗಿದ್ದು ಜಿಲ್ಲೆಯಲ್ಲಿ 32,958.95 ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಎಂದು ಸರ್ವೇ ಮಾಡಲಾಗಿದೆ. ಆದರೆ ಸದರಿ ಸಮೀಕ್ಷೆಯಲ್ಲಿ ಕೆಲವು ಲೋಪಗಳು ಕಂಡು ಬಂದಿದ್ದು. ಮತ್ತೆ ಹೋಬಳಿ ಮಟ್ಟದಲ್ಲಿ ಸರ್ವೇ ಅಧಿಕಾರಿಗಳನ್ನು ನೇಮಿಸಿ ಸಮೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ಶೇ 42 ರಷ್ಟು ಸರ್ವೇ ನಡೆಸಲಾಗಿದೆ. ಮೂರು ತಿಂಗಳ ಒಳಗಾಗಿ ಸಮೀಕ್ಷೆಯನ್ನು ಮುಗಿಸಲಾಗುವುದು. ರಾಜ್ಯ ಡೀಮ್ಡ್ ಫಾರೆಸ್ಟ್ ಸರ್ವೇಯಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದರು.

ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಸದರಿ ವರ್ಷ ಜಿಲ್ಲೆಯಲ್ಲಿ 14 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು ಈಗಾಗಲೇ 9 ಅರ್ಹ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. 4 ಪ್ರಕರಣಗಳು ತೀರ್ಮಾನ ಮಾಡಲು ಬಾಕಿ ಇದು 1 ಪ್ರಕರಣ ಸರ್ಕಾರದ ಹಂತದಲ್ಲಿ ಬಾಕಿ ಇದೆ ಎಂದರು.

ಜಿಪಂ ಸಿಇಒ ಅಧಿಕಾರಿ ಕೆ.ಆರ್.ನಂದಿನಿ, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ. ಶಾಸಕ ಎಚ್.ಟಿ ಮಂಜು, ವಿಧಾನಪರಿಷತ್ ಶಾಸಕ ಕೆ. ವಿವೇಕಾನಂದ, ಎಂ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಇತರರಿದ್ದರು.