ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಿ: ಮಲ್ಲಪ್ಪ ತೊದಲಭಾವಿ

| Published : Jul 09 2024, 12:51 AM IST

ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಿ: ಮಲ್ಲಪ್ಪ ತೊದಲಭಾವಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಕಲಿಕೆ ಉತ್ತಮವಾಗಿದ್ದು, ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು.

ಯಲಬುರ್ಗಾ ತಾಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಲೂಕಿನ ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಕಲಿಕೆ ಉತ್ತಮವಾಗಿದ್ದು, ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು ಎಂದು ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಭಾವಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಲಬುರ್ಗಾ ಮತ್ತು ಕುಕನೂರ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಆಯಾ ಗ್ರಾಪಂ ವತಿಯಿಂದ ಎಲ್ಲ ಸೌಲಭ್ಯವನ್ನು ಪಿಡಿಒಗಳು ದೊರಕಿಸಿಕೊಡಬೇಕು ಎಂದರು.

ಕೇಂದ್ರಗಳ ನಿರ್ಮಾಣದ ನಿವೇಶನಕ್ಕೆ ಸೂಕ್ತ ಜಾಗವನ್ನು ಆಯಾ ಗ್ರಾಪಂ ಮಟ್ಟದಲ್ಲಿ ತ್ವರಿತವಾಗಿ ನೀಡುವಂತೆ ಹೇಳುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದಪ್ಪ ಮಾಳೇಕೊಪ್ಪ ಮಾತನಾಡಿ, ೪೮ ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ಇದರಲ್ಲಿ ೧೬ ಕೇಂದ್ರಕ್ಕೆ ಮಾತ್ರ ಇನ್ನೂ ಕಟ್ಟಡ ಕಾಮಗಾರಿ ಪ್ರಾರಂಭವಾಗಿಲ್ಲ. ೩೨ ಕೇಂದ್ರಗಳಿಗೆ ನಿವೇಶನ ಸಿಕ್ಕಿದೆ. ಐದು ಕೇಂದಗಳಿಗೆ ನಿವೇಶನದ ಮಾತ್ರ ಕೊರತೆ ಇದೆ ಎಂದು ಉತ್ತರಿಸಿದರು. ಬಳಿಕ ಉಪಕಾರ್ಯದರ್ಶಿ ಮಲ್ಲಪ್ಪ ಮಾತನಾಡಿ, ಪಿಡಿಒಗಳು ಐದು ಕೇಂದ್ರಗಳಿಗೆ ಸೂಕ್ತ ಜಾಗ ಕೊಡಿಸಬೇಕು. ಎಲ್ಲ ಅಂಗನವಾಡಿ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ನಿರ್ಮಿಸಿಕೊಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿ ಮಹಾದೇವ ಪತ್ತಾರ ಅವರಿಗೆ ಸೂಚನೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಸಕಾಲಕ್ಕೆ ರೈತರಿಂದ ಬಿತ್ತನೆಯಾಗಿದೆ. ಒಟ್ಟು ೨೪೯೩ ಕ್ವಿಂಟಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ. ಇನ್ನೂ ೭೪೯ ಕ್ವಿಂಟಲ್ ಬೀಜದ ದಾಸ್ತಾನು ಇದೆ. ೧೨೬೦ ಸ್ಪಿಂಕ್ಲರ್‌ಗಳನ್ನು ರೈತರಿಗೆ ನೀಡಲಾಗಿದೆ. ಬೆಳೆ ವಿಮಾ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದರು.

ತಾಲೂಕಿನ ಸಮಾಜ ಕಲ್ಯಾಣ ಹಾಗೂ ಬಿಸಿಎಂ, ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಜೆಜೆಎಂ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಆರ್‌ಡಬ್ಲ್ಯೂ ಅಧಿಕಾರಿ ರಿಜ್ವನ್ ಬೇಗಂ ಅವರಿಗೆ ಡಿಎಸ್‌ಒ ಸೂಚಿಸಿದರು. ಇನ್ನೂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ಸೌಲಭ್ಯ ಒದಗಿಸಬೇಕು, ಜತೆಗೆ ಶೌಚಾಲಯ ಸ್ವಚ್ಛತೆ, ಗುಣಮಟ್ಟದ ಆಹಾರ ನೀಡಬೇಕು ಎಂದು ಸಮಾಜ ಕಲ್ಯಾಣ ಅಧಿಕಾರಿ ಶಶಿಧರ್ ಸಕ್ರಿಗೆ ಮಲ್ಲಪ್ಪ ನಿರ್ದೇಶನ ನೀಡಿದರು. ಸಭೆಗೆ ಗೈರಾದ ಕೆಲ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು.

ಈ ಸಭೆಯಲ್ಲಿ ತಾಪಂ ಇಒ ಸಂತೋಷ ಪಾಟೀಲ್, ಪಪಂ ಮುಖ್ಯಾಧಿಕಾರಿ ನಾಗೇಶ, ಅಧಿಕಾರಿಗಳಾದ ಲಿಂಗನಗೌಡ ಪಾಟೀಲ್, ಕೆ.ಟಿ. ನಿಂಗಪ್ಪ, ಎಂ.ಎಫ್. ಕಳ್ಳಿ, ಡಾ. ಶೇಖರ ಭಜಂತ್ರಿ, ಚನ್ನಪ್ಪ, ಎಫ್.ಡಿ. ಕಟ್ಟಿಮನಿ, ಅಜ್ಜಯ್ಯ ಮಠದ, ರಮೇಶ ಚಿಣಗಿ, ಬಸವರಾಜ ಗೋಗೇರಿ, ಶರೀಫ್ ಕೊತ್ವಾಲ್ ಸೇರಿದಂತೆ ಪಿಡಿಒಗಳು ಇದ್ದರು.