ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯದ ಪರಿಶಿಷ್ಟ ಜಾತಿ ಸಮುದಾಯಗಳಿಗೆ ನೀಡಿದ ಒಳಮೀಸಲಾತಿಯಂತೆ ಪರಿಶಿಷ್ಟ ಪಂಗಡಗಳ ಸಮುದಾಯಕ್ಕೂ ಒಳ ಮೀಸಲಾತಿ ಕಲ್ಪಿಸಲು ಆಯೋಗ ರಚನೆ ಮಾಡಬೇಕೆಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಜಂಟಿ ಕಾರ್ಯದರ್ಶಿ ಶ್ರೀನಿವಾಸಗೌಡ್ಲು ಆಗ್ರಹಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ನಾಗರಾಜ್‌ ಅವರಿಗೆ ಮನವಿ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 49 ಮೂಲ ಬುಡ ಕಟ್ಟು ಸಮುದಾಯಕ್ಕೆ ರಾಜ್ಯ ಸರ್ಕಾರ 2026-27ನೇ ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸಬೇಕು. ಬುಡಕಟ್ಟು ಸಮುದಾಯದಲ್ಲಿ ಸಾಕಷ್ಟು ಪ್ರಬಲ ಸಮುದಾಯಗಳಿವೆ. ಆ ಸಮುದಾಯಗಳು ಸಾಮಾಜಿಕ, ಆರ್ಥಿಕ ರಾಜಕೀಯವಾಗಿ ಸ್ಥಾನಮಾನ ಪಡೆದಿವೆ. ಅತಿ ಕಡಿಮೆ ಇರುವ ಸಮುದಾಯಗಳಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹೀಗಾಗಿ, ಪರಿಶಿಷ್ಟ ಜಾತಿಗಳಿಗೆ ಕಲ್ಪಿಸಿದಂತೆ ಪರಿಶಿಷ್ಟ ಪಂಗಡದ ಸಮುದಾಯಗಳಿಗೂ ಒಳ ಮೀಸಲಾತಿ ನೀಡಲು ಪ್ರತ್ಯೇಕ ಆಯೋಗ ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಬುಡಕಟ್ಟ ಸಮುದಾಯ ಹೆಚ್ಚಿರುವ ಪಶ್ಚಿಮಘಟ್ಟದ ಜಿಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರ ನೀಡುವ ಸೌಲಭ್ಯಗಳ ಭೌತಿಕ ಗುರಿ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡ ಪಿ.ರಾಜೇಶ್‌ ಮಾತನಾಡಿ, ಅಂಬೇಡ್ಕರ್‌ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಡಿ ನೀಡುವ ಸೌಲಭ್ಯ ಕೆಲವರಿಗೆ ಸೀಮಿತವಾಗಿವೆ. ಜಿಲ್ಲಾಡಳಿತ ಹಾಗೂ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ದಲ್ಲಾಳಿಗಳಿಗೆ ಕಡಿವಾಣ ಹಾಕಿ ನಿಜವಾದ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಜಿಲ್ಲಾ ಕಾರ್ಯದರ್ಶಿ ಮಡೆನೆರಳು ಶಂಕರ್‌, ಸಹ ಕಾರ್ಯದರ್ಶಿ ರಮೇಶ್‌, ಹಕ್ಕಿ-ಪಿಕ್ಕಿ ಮುಖಂಡ ದಿವಾಕರ್‌ ಮೊದಲಾದವರಿದ್ದರು.