ಕನ್ನಡಪ್ರಭ ವಾರ್ತೆ ಮಡಿಕೇರಿ

ಆಸಹಾಯಕರು ಹಾಗೂ ಮುಖ್ಯವಾಹಿನಿಯಿಂದ ದೂರವಿರುವ ನಾಗರಿಕರಿಗೆ ಕಾನೂನಿನ ಮಾಹಿತಿ ನೀಡುವುದು ಅರೆಕಾಲಿಕ ಕಾನೂನು ಸ್ವಯಂಸೇವಕರ ಕರ್ತವ್ಯವಾಗಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೊಸಮನಿ ಪುಂಡಲಿಕ ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಔಟಲಾ ಇಂಡಿಯಾ ಸಂಸ್ಥೆ ಹಾಗೂ ಮಡಿಕೇರಿ ವಕೀಲರ ಸಂಘ ಆಶ್ರಯದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಾಲ್ಕು ದಿನಗಳ ಕಾಲ ಏರ್ಪಡಿಸಲಾಗಿರುವ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದ ಜೊತೆ ಸೇರಿ ನೊಂದವರಿಗೆ ಕಾನೂನಿನ ಮಾಹಿತಿ ನೀಡುವುದು ಅರೆಕಾಲಿಕ ಕಾನೂನು ಸ್ವಯಂ ಸೇವಕರ ಜವಾಬ್ದಾರಿಯಾಗಿದ್ದು, ಆ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಸಲಹೆ ಮಾಡಿದರು.

ನಿಸರ್ಗದತ್ತ ಹಾಗೂ ಮನುಷ್ಯ ಮಾಡಿದ ಈ ಎರಡು ರೀತಿಯ ಕಾನೂನನ್ನು ಕಾಣಬಹುದಾಗಿದ್ದು, ನೈಸರ್ಗಿಕವಾಗಿ ದೊರೆಯುವ ಗಾಳಿ, ನೀರು, ಹಾಗೆಯೇ ಮನುಷ್ಯ ಮಾಡಿದ ಕಾನೂನು ಸಂವಿಧಾನಾತ್ಮಕವಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಗಾಳಿ, ನೀರು ಪ್ರಕೃತಿದತ್ತವಾಗಿ ದೊರೆಯಲಿದೆ. ಜೊತೆಗೆ ಮನುಷ್ಯನಿಗೆ ಹಸಿವು ನೀಗಿಸುವುದು ಅತ್ಯಗತ್ಯ ಎಂದು ಅವರು ವಿವರಿಸಿದರು.


ಮನುಷ್ಯ ಮಾಡಿದ ಕಾನೂನು ನಿಯಮಗಳನ್ನು ಸಂವಿಧಾನ ವ್ಯವಸ್ಥೆಯಲ್ಲಿ ಅನುಸರಿಸಬೇಕಿದ್ದು, ಆ ದಿಸೆಯಲ್ಲಿ ಎರಡು ರೀತಿಯ ಕಾನೂನುನನ್ನು ಪಾಲಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನುಡಿದರು.

ನಿಯಮಗಳನ್ನು ಪಾಲಿಸದಿದ್ದರೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಕಾನೂನಿನ ಅರಿವು ಇಲ್ಲದವರಿಗೆ ಮತ್ತು ನೊಂದವರಿಗೆ ಕಾನೂನಿನ ಮಾಹಿತಿ ನೀಡುವುದೇ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಕಾನೂನು ಸೇವೆಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದು ಹೊಸಮನಿ ಪುಂಡಲೀಕ ಹೇಳಿದರು.

ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ.ಜೋಸೆಫ್ ಅವರು ಮಾತನಾಡಿ ಕಾನೂನು ಸೇವಾ ಪ್ರಾಧಿಕಾರದಿಂದ ಮಾಹಿತಿ ಪಡೆದು ಇತರರಿಗೂ ಮಾಹಿತಿ ನೀಡುವಂತಾಗಬೇಕು. ಆ ದಿಸೆಯಲ್ಲಿ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಪಾತ್ರ ಹೆಚ್ಚಿನದ್ದಾಗಿದೆ ಎಂದರು.

ಹಿರಿಯ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಣಂ ಅವರು ಮಾತನಾಡಿ ಕಾನೂನು ಒಂದು ದೊಡ್ಡ ವಿಸ್ತಾರವಿದ್ದಂತೆ, ಅರಿವೇ ಗುರುವೇ ಎಂಬಂತೆ ಎಲ್ಲರೂ ಉತ್ತಮ ಬದುಕು ನಡೆಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಕಾನೂನಿನ ಬೆಳಕು ಎಲ್ಲೆಡೆ ಇರಬೇಕು. ಸ್ವಲ್ಪವಾದರೂ ಕಾನೂನಿನ ಜ್ಞಾನವಿದ್ದರೆ ಇತರರಿಗೆ ನೋವು ಉಂಟು ಆಗದಂತೆ ನಡೆದುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಮಾತನಾಡಿ ಗ್ರಾಮೀಣ ಜನರಿಗೆ ನ್ಯಾಯದಾನ ದೊರೆಯಬೇಕು ಎಂಬ ಉದ್ದೇಶದಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಅರೆಕಾಲಿಕ ಸ್ವಯಂ ಸೇವಕರು 97 ಮಂದಿ ನೋಂದಣಿ ಮಾಡಿದ್ದು, ಇವರಲ್ಲಿ 70 ಕ್ಕೂ ಹೆಚ್ಚು ಮಂದಿ ಕಾರ್ಯಾಗಾರಕ್ಕೆ ಆಗಮಿಸಿದ್ದಾರೆ ಎಂದರು.

ವಕೀಲರಾದ ಎಂ,ಎ.ನಿರಂಜನ್ ಅವರು ಕೌಟುಂಬಿಕ ಕಾನೂನುಗಳ ಕುರಿತು ಮಾತನಾಡಿದರು. 1 ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು ಪರಿಶಿಷ್ಟ ಜಾತಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ದೌರ್ಜನ್ಯ ಕಾಯ್ದೆ ಕುರಿತು ಮಾತನಾಡಿದರು. ಔಟಲಾ ಇಂಡಿಯಾ ಸಂಸ್ಥೆಯುವರು ಕಾನೂನು ಅರಿವು ಕುರಿತು ಮಾತನಾಡಿದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಸಿ.ಕೆ.ಬಸವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ ಸಿ.ವೀರಭದ್ರಯ್ಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಡಿ.ಎಸ್.ವಿನುತ, ತರಬೇತುದಾರರಾದ ಮೀಮಾನ್ಸ ಸಿಂಗ್, ಶಮಾ ಡಿ., ನಿಹಾರಿಕಾ ನಾಯ್ಡು, ಕಾನೂನು ನೆರವು ಅಭಿರಕ್ಷಕರಾದ ಮೈಮುನಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಇದ್ದರು.