ಜನರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರಿಗೆ ಅಗತ್ಯ ನೆರವು ನೀಡಿ: ಕೆ.ಸಿ.ಮಂಜುನಾಥ್

| Published : Sep 25 2025, 01:00 AM IST

ಜನರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರಿಗೆ ಅಗತ್ಯ ನೆರವು ನೀಡಿ: ಕೆ.ಸಿ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿನ ಪೌರ ಕಾರ್ಮಿಕರಿಗೆ ವೇತನ ನೀಡಿಲ್ಲ. ನಗರ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರಿಗೆ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ ದುಡಿಸಿಕೊಂಡರೆ ಸಾಲದು ಸರಿಯಾಗಿ ವೇತನ ಪಾವತಿಸಬೇಕು. ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸೈನಿಕರು ದೇಶ ರಕ್ಷಣೆ ಮಾಡಿದರೆ, ಪೌರಕಾರ್ಮಿಕರು ನಗರವನ್ನು ಸ್ವಚ್ಛ ಮಾಡಿ ಜನರ ಆರೋಗ್ಯ ರಕ್ಷಣೆ ಮಾಡುತ್ತಾರೆ. ಅವರಿಗೆ ಅಗತ್ಯ ನೆರವು ನೀಡುವಂತೆ ಪುರಸಭೆ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಆಗ್ರಹಿಸಿದರು.

ಪಟ್ಟಣದ ಪುರಸಭೆಯ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪೌರಕಾರ್ಮಿಕರಿಗೆ ಒದಗಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿನ ಪೌರ ಕಾರ್ಮಿಕರಿಗೆ ವೇತನ ನೀಡಿಲ್ಲ. ನಗರ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರಿಗೆ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಕೇವಲ ದುಡಿಸಿಕೊಂಡರೆ ಸಾಲದು ಸರಿಯಾಗಿ ವೇತನ ಪಾವತಿಸಬೇಕು. ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ಪೌರ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪೌರ ಕಾರ್ಮಿಕರ ಮಕ್ಕಳು ಉತ್ತಮವಾಗಿ ವ್ಯಾಸಂಗ ಮಾಡಿ ಸಮಾಜದ ಉನ್ನತ ಹುದ್ದೆಗೇರುವಂತಾಗಬೇಕು ಎಂದರು.

ಹಿರಿಯ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ, ಪೌರ ಕಾರ್ಮಿಕರನ್ನು ಪುರಸಭೆ ಬಿಕ್ಷುಕರಂತೆ ನೋಡಬಾರದು. ಅವರಿಗೂ ಒಂದು ಕುಟುಂಬವಿದೆ. ತಮ್ಮ ಆರೋಗ್ಯ ಬದಿಗಿಟ್ಟು ಮನೆ ಮನೆ ಬಾಗಿಲಿಗೆ ಹೋಗಿ ಕಸಕಡ್ಡಿ ಎತ್ತಿ ಚರಂಡಿಗಳನ್ನು ಸ್ವಚ್ಛಮಾಡಿ ನಗರದ ಜನರ ಆರೋಗ್ಯ ರಕ್ಷಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ವೇತನವಿಲ್ಲದೆ ನರಳುತ್ತಿರುವುದು ಸದಸ್ಯರಾದ ನಾವೇ ನಾಚಿಕೆ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೊದಲು ಪೌರ ಕಾರ್ಮಿಕರಿಗೆ ವೇತನ ನೀಡುವ ಜೊತೆಗೆ ಅವರಿಗೆ ಅಗತ್ಯವಾದ ಕೈಗವಚಗಳು, ಶೂಗಳು ಮತ್ತಿತರ ಪರಿಕರಗಳನ್ನು ಒದಗಿಸಬೇಕು. ಪಟ್ಟಣ ವ್ಯಾಪ್ತಿಯ ಹೊಸಹೊಳಲಿನಲ್ಲಿ ಪೌರ ಕಾರ್ಮಿಕರ ನಿವೇಶನ ಮತ್ತು ವಸತಿ ನಿರ್ಮಾಣಕ್ಕಾಗಿ ಜಾಗ ಕಾಯ್ದಿರಿಸಿದ್ದು, ಮೊದಲು ಅವರಿಗೆ ಅಗತ್ಯ ನಿವೇಶನ ನೀಡಿ ಎಂದು ಆಗ್ರಹಿಸಿದರು.

ಅಧ್ಯಕ್ಷೆ ಪಂಕಜ ಪ್ರಕಾಶ್ ಮಾತನಾಡಿ, ಪುರಸಭೆಯಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಪೌರ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗಿಲ್ಲ, ಆದರೂ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮನೆ ಹಾಗೂ ನಿವೇಶನಗಳನ್ನು ವಿತರಿಸಲು ಆಡಳಿತ ಮಂಡಳಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಎನ್.ಪ್ರವೀಣ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಆರ್.ರವೀಂದ್ರಬಾಬು, ಸದಸ್ಯರಾದ ಬಸ್ ಸಂತೋಷ್ ಕುಮಾರ್, ಶಾಮಿಯಾನ ತಿಮ್ಮೇಗೌಡ, ಇಂದ್ರಾಣಿ ವಿಶ್ವನಾಥ್, ಶೋಭಾ ದಿನೇಶ್, ಕೆ.ಎಸ್.ಪ್ರಮೋದ್ ಕುಮಾರ್, ಮುಖ್ಯಾಧಿಕಾರಿ ಅಶೋಕ್, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಚೆಲುವರಾಜು, ಮೇಸ್ತ್ರಿ ಮುತ್ತಯ್ಯ, ಸೇರಿದಂತೆ ನೂರಾರು ಪೌರಕಾರ್ಮಿಕರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.