ಅಂಗವಿಕಲ ಮಕ್ಕಳಿಗೆ ಅಗತ್ಯ ಸೌಲಭ್ಯ ತಲುಪಿಸಿ: ಕಲ್ಲಪ್ಪ

| Published : Aug 08 2025, 01:03 AM IST

ಸಾರಾಂಶ

, ಅಂಗವಿಕಲ ಮಕ್ಕಳ ಪಾಲಕರು ಅಂಗಾಂಗ ವೈಫಲ್ಯಗಳ ಮಧ್ಯೆ ಸಾಧನೆ ಮಾಡಿದ ಜಗತ್ತಿನ ಹಲವಾರು ಸಾಧಕರ ಕುರಿತು ತಿಳಿದುಕೊಳ್ಳಬೇಕು. ಇದರಿಂದ ತಮ್ಮ ಮಕ್ಕಳ ಸಾಮರ್ಥ್ಯ ಅರಿಯಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ.

ಶಿಗ್ಗಾಂವಿ: ಅಂಗವಿಕಲರ ಮಕ್ಕಳ ಸೇವೆ ನಮಗೆ ಸಿಗುವ ಭಾಗ್ಯವಾಗಿದ್ದು, ಅಧಿಕಾರಿಗಳು ಸರ್ಕಾರದಿಂದ ಸಿಗುವ ಎಲ್ಲ ಸೌಕರ್ಯಗಳನ್ನು ಅಗತ್ಯವಿರುವ ಅಂಗವಿಕಲ ಮಕ್ಕಳಿಗೆ ಪ್ರಾಮಾಣಿಕವಾಗಿ ಮುಟ್ಟಿಸಬೇಕು ಎಂದು ರೋಶನಿ ಟ್ರಸ್ಟ್‌ನ ಸಂಯೋಜಕ ಕಲ್ಲಪ್ಪ ನಾಯಕಾರ ತಿಳಿಸಿದರು.ಪಟ್ಟಣದ ತಾಪಂ ಸಭಾಭವನದಲ್ಲಿ ರೋಶನಿ ಟ್ರಸ್ಟ್, ಬೆಂಗಳೂರಿನ ಎಪಿಡಿ ಸಂಸ್ಥೆ ಮತ್ತು ತಾಪಂ ಆಶ್ರಯದಲ್ಲಿ ನಡೆದ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಪಡೆಯುವ ಸಾಧನ ಸಲಕರಣೆಗಳನ್ನು ಸದ್ಬಳಕೆ ಮಾಡಿಕೊಂಡು ಮಗುವಿಗೆ ಸರಿಯಾದ ತರಬೇತಿ ನೀಡಬೇಕು ಎಂದರು. ೮ ವರ್ಷ ತುಂಬಿದ ನಂತರ ಎಷ್ಟೇ ಹಣ ಖರ್ಚು ಮಾಡಿದರೂ ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಪಟ್ಟಣದಲ್ಲಿ ರೋಶನಿ ಸಂಸ್ಥೆಯಿಂದ ಪ್ರಾರಂಭವಾಗಿರುವ ಚಿಕಿತ್ಸಾ ಮತ್ತು ತರಬೇತಿ ಕೇಂದ್ರವನ್ನು ಬಳಸಿಕೊಳ್ಳುವುದರಿಂದ ಆರ್ಥಿಕ ಹೊರೆ ಕಡಿಮೆಯಾಗಿ ಅಂಗವಿಕಲ ಮಕ್ಕಳ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಹಾಯವಾಗುತ್ತದೆ ಎಂದರು.ಎಂಪಿಎಂ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಮಾತನಾಡಿ, ಅಂಗವಿಕಲ ಮಕ್ಕಳ ಪಾಲಕರು ಅಂಗಾಂಗ ವೈಫಲ್ಯಗಳ ಮಧ್ಯೆ ಸಾಧನೆ ಮಾಡಿದ ಜಗತ್ತಿನ ಹಲವಾರು ಸಾಧಕರ ಕುರಿತು ತಿಳಿದುಕೊಳ್ಳಬೇಕು. ಇದರಿಂದ ತಮ್ಮ ಮಕ್ಕಳ ಸಾಮರ್ಥ್ಯ ಅರಿಯಲು ಮತ್ತು ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದರು.

ತಾಪಂ ಯೋಜನಾ ಅಧಿಕಾರಿ ಶಿವಾನಂದ ಸಣ್ಣಕ್ಕಿ ಮಾತನಾಡಿ, ಪ್ರತಿಯೊಂದು ಪಂಚಾಯಿತಿಗಳು ಶೇ. ೫ರಷ್ಟು ಅಥವಾ ಅದಕಿಂತ ಹೆಚ್ಚು ಅನುದಾನವನ್ನು ಅಂಗವಿಕಲ ಮಕ್ಕಳ ಕಲ್ಯಾಣಕ್ಕಾಗಿ ಬಳಸಬೇಕು. ಶಿಗ್ಗಾಂವಿಯ ತಾಪಂದಿಂದ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ನೀಡಲಾಗುತ್ತಿದೆ. ಈ ಮಕ್ಕಳ ಸೇವೆ ಮಾಡುವ ಸಂಸ್ಥೆಗೆ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಂಗವಿಕಲರ ಪಾಲಕರು ಅವರನ್ನು ಅತ್ಯಂತ ಪ್ರೀತಿ ಮತ್ತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಎಂಆರ್‌ಡಬ್ಲ್ಯು ಸಿದ್ದಪ್ಪ ಮಸಳಿ, ತಾಪಂ ಅಧಿಕಾರಿ ಕಾಮಾಕ್ಷಿ ಶಿರಹಟ್ಟಿ, ರಮೇಶ ಹರಿಜನ, ವಿಆರ್‌ಡಬ್ಲ್ಯು ಮೀನಾಕ್ಷಿ ಕಡಕೋಳ, ಪ್ರವೀಣ ಮಾಂಗ್ಲೇನವರ, ಮಂಜುನಾಥ ಹೊಟ್ಟೆಗೌಡ್ರ, ಸೌಂದರ್ಯ ಅಕ್ಕಿಹೊಳ್ಳಿ ಇತರರಿದ್ದರು.