ಸ್ತ್ರೀ ಸಬಲೀಕರಣಕ್ಕೆ ಮುಕ್ತ ಅವಕಾಶ ಕಲ್ಪಿಸಿ: ನ್ಯಾಯಾಧೀಶ ಅಮೋಲ

| Published : Mar 17 2025, 01:31 AM IST

ಸಾರಾಂಶ

ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಆಕೆಯನ್ನು ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಪ್ರಬುದ್ಧಗೊಳಿಸಬೇಕಾಗಿದೆ.

ಬ್ಯಾಡಗಿ: ಸ್ತ್ರೀವಾದ ಅಥವಾ ಸ್ತ್ರೀ ಸಬಲೀಕರಣವೆಂದರೆ ಪುರುಷರ ವಿರುದ್ಧ ಅಥವಾ ಪುರುಷರಿಗೆ ಸಮಾನ ಎನ್ನುವಂಥ ನಿಲುವಿಗೆ ಬರಬಾರದು. ಬದಲಾಗಿ ಮಹಿಳೆಯರ ಹಕ್ಕುಗಳು ಮತ್ತು ಕಾನೂನುಗಳ ಉಲ್ಲಂಘನೆ, ನ್ಯಾಯಸಮ್ಮತವಾಗಿ ಸಮಾಜದಲ್ಲಿ ಆಕೆಗೆ ಸಿಗಬೇಕಾದ ಸ್ಥಾನಮಾನ ಅಥವಾ ಅವಕಾಶಗಳಿಗೆ ದೇಶದಲ್ಲಿ ಮುಕ್ತವಾದ ವಾತಾವರಣ ನಿರ್ಮಿಸುವುದಾಗಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ ಹಿರೇಕುಡೆ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ. ಆಕೆಯನ್ನು ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಪ್ರಬುದ್ಧಗೊಳಿಸಬೇಕಾಗಿದೆ. ಒಂದು ವೇಳೆ ಮಹಿಳೆಯರು ಬಲಿಷ್ಠರಾದಲ್ಲಿ ಸಮುದಾಯದ ನಾಯಕಿಯರಾಗಲಿದ್ದಾರೆ. ಏಕೆಂದರೆ ಅವರು ಇನ್ನೊಬ್ಬರನ್ನು ನಂಬಿಸುವುದಕ್ಕಾಗಿ ಹೋರಾಟ ಮಾಡುವುದಿಲ್ಲ. ಅವರನ್ನು ನೈತಿಕವಾಗಿ ಬಲಿಷ್ಠಗೊಳಿಸದಿದ್ದರೆ ಇನ್ನಷ್ಟು ಅಪರಾಧ ಪ್ರಕರಣ ಕಾಣಬಹುದು. ಆಕೆಯ ವಿರುದ್ಧ ಅನ್ಯಾಯ ನಡೆದಾಗ ಸಾರ್ವಜನಿಕವಾಗಿ ಖಂಡಿಸುವ ಕೆಲಸವಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಯಾಲಯದಲ್ಲಿರುವ ಮಹಿಳಾ ವಕೀಲರಿಗೆ ಹಾಗೂ ಮಹಿಳಾ ಸಿಬ್ಬಂದಿಗೆ, ಮ್ಯೂಸಿಕಲ್ ಚೇರ್, ಬೆಂಕಿಯ ಸಹಾಯವಿಲ್ಲದೆ ಅಡುಗೆ ಮಾಡುವುದು, ನೀರಿನಲ್ಲಿ ನಾಣ್ಯ ಎಸೆಯುವ ಸ್ಪರ್ಧೆ, ಓಡಿ ಹೋಗಿ ಕಪ್ಪನ್ನು ಜೋಡಿಸುವುದು, ಬಾಲನ್ನು ಬ್ಯಾಲೆನ್ಸ್ ಮಾಡಿ ಹಾಕುವುದು, ಏಕಪಾತ್ರಾಭಿನಯ, ಹಾಡಿನ ಸ್ಪರ್ಧೆ ಸೇರಿದಂತೆ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ಉಪಾಧ್ಯಕ್ಷ ಬಿ.ಜಿ. ಹಿರೇಮಠ, ಕಾರ್ಯದರ್ಶಿ ಮಂಜುನಾಥ ಹಂಜಗಿ, ಸಹ ಕಾರ್ಯದರ್ಶಿ ಎನ್.ಬಿ. ಬಳಿಗಾರ, ಹಿರಿಯ ನ್ಯಾಯವಾದಿಗಳಾದ ಬಿ.ಎಸ್. ಚೂರಿ, ಆರ್.ವಿ. ಬೆಳಕೇರಿಮಠ, ವಿ.ಎಸ್. ಕಡಗಿ, ಪಿ.ಆರ್. ಮಠದ, ಎಫ್ಎಂ. ಮುಳುಗುಂದ, ಎಂ.ಜೆ. ಮುಲ್ಲಾ, ಭಾರತಿ ಕುಲಕರ್ಣಿ, ವಿಜಯ ಯರಗಲ್ಲ, ಮಂಜುಳಾ ಜಿಗಳಿ, ಪ್ರಕಾಶ ಬನ್ನಿಹಟ್ಟಿ, ಎಸ್.ಎಚ್. ಗುಂಡಪ್ಪನವರ ಸೇರಿದಂತೆ ಇತರರಿದ್ದರು.

ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್‌ಗೆ ಸೇರ್ಪಡೆ

ರಾಣಿಬೆನ್ನೂರು: ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ವಿವಿಧ ಪಕ್ಷಗಳ 50 ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು. ಪಕ್ಷದ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ್ ಪಕ್ಷದ ಶಾಲು ಹಾಕಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಹನುಮಂತಪ್ಪ ಬಿಷ್ಟಣ್ಣನವರ, ಕೆಂಚಪ್ಪ ಕಲ್ತುಂಡಿ, ಜಗದೀಶ ಹೊನ್ನತ್ತಿ, ಸುರೇಶ ಸುಣಗಾರ, ಸುರೇಶ ಕುದ್ರಿಹಾಳ, ಬೀರಪ್ಪ ಕುದ್ರಿಹಾಳ, ಗುಡ್ಡಪ್ಪ ಚಲವಾದಿ, ದಿಳ್ಳಪ್ಪ ಬಾರ್ಕಿ, ನಾಗರಾಜ ಕುದ್ರಿಹಾಳ, ಬೀರೇಶ್ ಬಾರ್ಕಿ, ಹನುಮಂತಪ್ಪ ಗುಂಡಣ್ಣನವರ, ಗುಡ್ಡಪ್ಪ ಗುಂಡಣ್ಣನವರ, ಮಾಲತೇಶ ಕಾಯಕದ, ಬೀರೇಶ್, ಮಾರುತಿ ಬಾರ್ಕಿ, ಕಾಂತೇಶ ಸುಣಗಾರ, ಕುಮಾರ ಬಾರ್ಕಿ, ನೀಲಪ್ಪ ಹರವಿ ಮತ್ತಿತರರಿದ್ದರು.