ಕೊಪ್ಪಳ: ಅನಿರೀಕ್ಷಿತ ಘಟನೆಗಳಿಂದ ವಂಚಿತರಾದ ಸಂತ್ರಸ್ತ ಮಕ್ಕಳಿಗೆ ಗುಣಮಟ್ಟದ ಬದುಕು ರೂಪಿಸುವ ಹಾಗೂ ನೀಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದು ಡಿಸಿ ಡಾ. ಸುರೇಶ ಬಿ ಇಟ್ನಾಳ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಹಾಗೂ ಯುನಿಸೆಫ್ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಮಕ್ಕಳ ಹಕ್ಕು ವ್ಯವಸ್ಥೆಗಳನ್ನು ಬಲಪಡಿಸುವಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಮಗುವಿನ ಹಕ್ಕುಗಳಾದ ಸುಂದರ ಬಾಲ್ಯ, ಆರೋಗ್ಯ ಮತ್ತು ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಅದಕ್ಕೆ ಕಾನೂನಿನಡಿಯಲ್ಲಿ ಸಾಧ್ಯವಿರುವ ಎಲ್ಲ ವ್ಯವಸ್ಥೆ ಅಧಿಕಾರಿ, ಸಾಂಸ್ಥಿಕ ಹಾಗೂ ಅಸಾಂಸ್ಥಿಕ ಪ್ರತಿನಿಧಿಗಳು ಮಗುವಿಗೆ ಒದಗಿಸಬೇಕು. ಕುಟುಂಬದ ವಾತಾವರಣದಲ್ಲಿ ಬೆಳೆಯುವ ಮಗು ಸಮಾಜಕ್ಕೆ ಉತ್ತಮ ಪ್ರಜೆಯಾಗಬಲ್ಲದು ಹಾಗೂ ಗುಣಮಟ್ಟದ ಜೀವನ ಹೊಂದಬಹುದು. ಆದರೆ ಕೆಲವು ಅನಿರೀಕ್ಷಿತ ಘಟನೆಗಳಿಂದ ಸಂತ್ರಸ್ತರಾದ ಮಕ್ಕಳಿಗೆ ಮತ್ತೆ ಅಂತಹ ಗುಣಮಟ್ಟದ ಬದುಕನ್ನು ನೀಡುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆ, ಕಾರ್ಯಕ್ರಮ ರೂಪಿಸಿದ್ದು, ಅವುಗಳನ್ನು ವೈಯಕ್ತಿಕ ಹಿತಾಸಕ್ತಿ ಹಾಗೂ ಜವಾಬ್ದಾರಿಯಿಂದ ಸಂತ್ರಸ್ತ ಮಕ್ಕಳಿಗೆ ನೀಡುವ ಕೆಲಸ ಮಾಡಬೇಕು.ಇಂತಹ ಪ್ರಕರಣಗಳಲ್ಲಿ ಮಗುವಿನ ಗುರುತು ಬಹಿರಂಗಪಡಿಸದೆ, ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸೌಲಭ್ಯ ಮಗುವಿಗೆ ಒದಗಿಸಬೇಕು ಎಂದು ಹೇಳಿದರು.

ಕೇಂದ್ರ ಸ್ಥಾನದಲ್ಲಿರಿ: ಅಧಿಕಾರಿಗಳು ಸದಾ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ನಡುವೆ ಸೂಕ್ತ ಸಮನ್ವಯ ಸಾಧಿಸಿ ಸರ್ಕಾರದ ಸುತ್ತೋಲೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.ಗ್ರಾಪಂ ಕಾರ್ಯದರ್ಶಿ, ಪಿಡಿಒ ಹಾಗೂ ವಿಎ ಸೇರಿದಂತೆ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಇದ್ದು, ತುರ್ತು ಸಂದರ್ಭ ಹೊರತುಪಡಿಸಿ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದು ಡಿಸಿ ಅಧಿಕಾರಿಗಳಿಗೆ ಹೇಳಿದರು.

ನಿತ್ಯ ಹಾಸ್ಟಲ್ ಗೆ ಭೇಟಿ ನೀಡಿ: ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವುದು ಮತ್ತು ಬಾಲ್ಯವಿವಾಹ ತಡೆಯುವುದು ಮುಖ್ಯವಾಗಿದೆ. ಅಧಿಕಾರಿಗಳು ವಾರಕ್ಕೆ ಕನಿಷ್ಠ ೧೦ ರಿಂದ ೧೨ ಹಾಗೂ ಪ್ರತಿ ದಿನ ಯಾವುದಾದರೂ ಒಂದು ಹಾಸ್ಟೆಲ್‌ಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದರು

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಸನಬದ್ಧವಾಗಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ೫ ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಇವುಗಳಲ್ಲಿ ಒಟ್ಟು ೮೭ಮಕ್ಕಳು ಇದ್ದಾರೆ. ಇಲ್ಲಿನ ಮಕ್ಕಳಿಗೆ ಆರೋಗ್ಯ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕುಟುಂಬ ಬಲಪಡಿಸುವ ಮೂಲಕ ಮಕ್ಕಳನ್ನು ಕುಟುಂಬದ ವಾತಾವರಣದಲ್ಲೇ ಬೆಳೆಸಲು ವಿಶೇಷ ಮಾದರಿ ರೂಪಿಸಲಾಗಿದೆ. ೧೮ ವರ್ಷ ಒಳಗಿನ ೨೦ ಮಕ್ಕಳಿಗೆ ಹಾಗೂ ೧೮ ವರ್ಷ ಪೂರೈಸಿದ ೨೧ ಯುವಕ, ಯುವತಿಯರಿಗೆ ಉಪಕಾರ ಯೋಜನೆ ಹಾಗೂ ವಿವಿಧ ತರಬೇತಿ ಕೋರ್ಸ್‌ಗಳಿಗೆ ನೆರವು ನೀಡಲಾಗುತ್ತಿದೆ. ನೇರ ನಗದು ವರ್ಗಾವಣೆ ಮೂಲಕ ಹಣಕಾಸಿನ ನೆರವು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.


ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ವ್ಯವಸ್ಥಾಪಕ ಹರೀಶ್ ಜೋಗಿ ಮಾತನಾಡಿ, ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ.ಎಲ್ಲ ಶಾಲಾ ಕಾಲೇಜು, ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಕ್ರಮ ಸಂಬಂಧಿಸಿದ ಅಧಿಕಾರಿಗಳು ಅನುಸರಿಸಬೇಕು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಂಬರೀಶ್ ಹಾವಿನ್, ಕೊಪ್ಪಳ ಬಾಲನ್ಯಾಯ ಮಂಡಳಿಯ ಸದಸ್ಯ ನೇತ್ರಾವತಿ ಪಾಟೀಲ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ್ ಕಡಗದ್, ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್, ಹೈದರಾಬಾದ್ ಯುನಿಸೆಫ್‌ನ ಮಕ್ಕಳ ತಜ್ಞ ಸೋನಿ ಕುಟ್ಟಿ ಜಾರ್ಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಡಿಡಿಪಿಯು, ಡಿಡಿಪಿಐ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಲ್ಯಾಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿದ್ದರು.