ರೈತರಿಗೆ ತ್ವರಿತ ಸೇವೆ ಒದಗಿಸಿ: ಗುಡಗುಂಟಿ

| Published : Jul 01 2025, 12:47 AM IST

ಸಾರಾಂಶ

ಸರ್ಕಾರ ಕಂಪ್ಯೂಟರ್‌, ಲ್ಯಾಪ್‌ಟ್ಯಾಪ್‌ಗಳನ್ನು ನೀಡಿ ಸರ್ಕಾರಿ ಸೇವೆ ವಿಳಂಬವಾಗದಂತೆ ಕ್ರಮ ಜರುಗಿಸಿದ್ದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಜಮಖಂಡಿ

ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಬಳಸಿಕೊಂಡು ರೈತರಿಗೆ ತ್ವರಿತ ಸೇವೆ ಒದಗಿಸಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಹಸೀಲ್ದಾರ್‌ ಕಚೇರಿಯಲ್ಲಿ ಸೋಮವಾರ ಗ್ರಾಮಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಪ್ರತಿಗ್ರಾಮದಲ್ಲಿ ರೈತರಿಗೆ ವಿವಿಧ ಕೆಲಸಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಅನೇಕ ರೀತಿಯ ಪತ್ರಗಳ ಅವಶ್ಯಕತೆ ಇರುತ್ತದೆ. ಅದನ್ನು ಮನಗಂಡ ಸರ್ಕಾರ ಕಂಪ್ಯೂಟರ್‌, ಲ್ಯಾಪ್‌ಟ್ಯಾಪ್‌ಗಳನ್ನು ನೀಡಿ ಸರ್ಕಾರಿ ಸೇವೆ ವಿಳಂಬವಾಗದಂತೆ ಕ್ರಮ ಜರುಗಿಸಿದ್ದು ಶ್ಲಾಘನೀಯವಾಗಿದೆ. ಅಧಿಕಾರಿಗಳು ತಂತ್ರಜ್ಞಾನದ ಸದುಪಯೋಗ ಪಡಿಸಿಕೊಂಡು ತ್ವರಿತ ಸೇವೆ ಒದಗಿಸಬೇಕೆಂದರು. ಶಾಸಕರ ಅನುದಾನದಲ್ಲಿ ಈಗಾಗಲೇ 8 ಕಂಪ್ಯೂಟರ್‌ ವಿತರಿಸಲಾಗಿದೆ. ತಾಲೂಕಿಗೆ ಒಟ್ಟು 30 ಲ್ಯಾಪ್‌ಟಾಪ್‌ಗಳ ಅವಶ್ಯಕತೆ ಇದೆ ಸದ್ಯ 23 ವಿತರಣೆಯಾಗಿದೆ ಎಂದು ತಿಳಿಸಿದರು.

ತಹಸೀಲ್ದಾರ್‌ ಸದಾಶಿವ ಮಕ್ಕೊಜಿ ಮಾತನಾಡಿ, ಕಳೆದ 3 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ನಡೆಯುತ್ತಿದೆ. ಎಲ್ಲ ದಸ್ತಾವೇಜುಗಳನ್ನು ಒಂದೆಡೆ ದೊರಕುವಂತೆ ಮಾಡುವುದು, ನಿಗದಿತ ಕಾಲದ ಮಿತಿಯಲ್ಲಿ ಸೇವೆಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಸರ್ಕಾರ ಇ-ತಂತ್ರಾಂಶವನ್ನು ಸಿದ್ಧಪಡಿಸಿದ್ದು ಸಾರ್ವಜನಿಕರ, ರೈತರಿಗೆ ಸರ್ಕಾರದ ಸೇವೆಗಳನ್ನು ತ್ವರಿತವಾಗಿ ಒದಗಿಸುವ ಉದ್ದೇಶ ಹೊಂದಿದೆ. ತಾಲೂಕಿನ 15 ಗ್ರಾಮಲೆಕ್ಕಾಧಿಕಾಗಿಗಳಿಗೆ ಲ್ಯಾಪ್‌ಟ್ಯಾಪ್‌ಗಳನ್ನು ವಿತರಿಸಲಾಗುತ್ತಿದೆ ಎಂದರು. ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.