ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ೧೩ ತಾಲೂಕುಗಳಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಅಧಿಕಾರಿಗಳಿಂದ ಶೀಘ್ರ ಪರಿಹಾರ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ಸಲ್ಲಿಸಿದರು.ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ೨೦೨೩-೨೪ನೇ ಫಸಲ್ ಬಿಮಾ ಯೋಜನೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರುವ ಕುರಿತು ೩ ತಿಂಗಳಿನಿಂದ ನಿರಂತರವಾಗಿ ದೊಡ್ಡ ಹೋರಾಟ ಮಾಡಿ ಪಾರದರ್ಶಕವಾಗಿ ಬೆಳೆ ಸಮೀಕ್ಷೆ ಹಾಗೂ ಬೆಳೆ ಕಟಾವೂ ಮಾಡಿರುವ ವಿವರವನ್ನು ನೀಡಬೇಕಾಗಿದ್ದು, ಕೃಷಿ, ಕಂದಾಯ, ಪಂಚಾಯತ್ ರಾಜ್ಯ, ಜಿಲ್ಲಾ ಸಂಖ್ಯಾ ಹಾಗೂ ಜಿಲ್ಲಾಡಳಿತ ಮಾಹಿತಿ ನೀಡುತ್ತಿಲ್ಲ, ಕೂಡಲೇ ಎಲ್ಲಾ ದಾಖಲೆಗಳನ್ನು ನೀಡಿ ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಮನವಿ ಮಾಡಿದರು.ಜಿಲ್ಲಾಧ್ಯಂತ ನಡೆಯುತ್ತಿರು ಎಲ್ಲ ನೀರಾವರಿ ಕಾಮಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿದ್ದು, ತುಬಚಿ- ಬಬಲೇಶ್ವರ, ಮುಳವಾಡ, ಚಿಮ್ಮಲಗಿ, ರೇವಣಸಿದ್ದೇಶ್ವರ, ಬೂದಿಹಾಳ-ಪೀರಾಪುರ ಸೇರಿದಂತೆ ವಿವಿಧ ಏತನೀರಾವರಿ ಯೋಜನೆಗಳು ಸಂಪೂರ್ಣವಾಗಿ ಮುಗಿಸಿ ಭೂಸ್ವಾಧಿನದ ಹಣವನ್ನು ರೈತರಿಗೆ ಶೀಘ್ರದಲ್ಲಿ ಕೊಡಿಸಬೇಕು ಎಂದರು.ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆಗಳಿಂದ ರೈತರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿದ್ದು, ಹಗಲು ಮತ್ತು ರಾತ್ರಿ ವೇಳೆ ಸೇರಿ ೭ ಗಂಟೆ ತ್ರಿಫೆಸ್ ಹಾಗೂ ರಾತ್ರಿ ಪೂರ್ತಿ ಸಿಂಗಲ್ ಫೆಸ್ ಕರೆಂಟ್ ನೀಡುವುದು ಹಾಗೂ ಟಿ.ಸಿ ಸಮಸ್ಯೆಯನ್ನು ಬಗೆಹರೆಸಬೇಕು, ರಾತ್ರಿ ವೇಳೆ ಕಾಡು ಪ್ರಾಣಿ ಹಾಗೂ ವಿಷಜಂತುಗಳು ಕಡಿತದಿಂದ ಹಲವಾರು ಸಾವುನೋವುಗಳು ಸಂಭಂವಿಸಿವೆ ಹಾಗಾಗಿ ಹೆಸ್ಕಾಂ ಅಧಿಕಾರಿಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಕೆರೆ ನೀರು ತುಂಬಿಸುವ ಯೋಜನೆಗಳಲ್ಲಿ ಇನ್ನು ಹಲವಾರು ಕೆರೆಗಳು ಈ ಯೋಜನೆಯಲ್ಲಿ ಇಲ್ಲದೇ ಅನೇಕ ರೈತರಿಗೆ ಸಮಸ್ಯೆಗಳಾಗುತ್ತಿವೆ. ಎಲ್ಲ ಕೆರೆಗಳನ್ನು ತುಂಬಿಸಬೇಕು. ಈಗಾಗಲೇ ಜಂಬಗಿ(ಆ), ಆಸ್ಕಿ, ಬೆಕಿನಾಳ, ಬೂದಿಹಾಳ.ಪಿ.ಟಿ ಕೆರೆಗಳಲ್ಲಿ ಹೋರಾಟ ಮಾಡಿರುವ ರೈತರ ಹಿತದೃಷ್ಟಿಯನ್ನು ನೋಡಿಕೊಂಡು ಕುಡಲೇ ಜಿಲ್ಲೆಯ ಎಲ್ಲ ಕೆರೆಗಳನ್ನು ಮಳೆಗಾಲದಲ್ಲಿ ಹಾಗೂ ಬೇಸಿಗೆಯಲ್ಲಿ ೩-೪ ಭಾರಿ ತುಂಬಿಸಬೇಕು. ಕೃಷಿ, ಪಶುಸಂಗೋಪನಾ ಇಲಾಖೆ, ತೋಟಗಾರಿಕೆ ಸೇರಿದಂತೆ ರೈತರಿಗೆ ಅವಶ್ಯವಿರುವ ಎಲ್ಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಮಹಾದೇವಪ್ಪ ತೇಲಿ, ತಿಕೋಟಾ ಅಧ್ಯಕ್ಷ ಸಾತಲಿಂಗಯ್ಯ ಸಾಲಿಮಠ, ಮಹಾದೇವ ಕದಂ, ಮಹಾಂತೆಶ ಮಮದಾಪುರ,ಸಂಗಪ್ಪ ಟಕ್ಕೆ, ತಿಪ್ಪರಾಯ ಭೈರೋಡಗಿ, ವಿಠ್ಠಲ ಬಿರಾದಾರ, ಸೋಮನಗೌಡ ಪಾಟೀಲ, ಪ್ರಲ್ಹಾದ ನಾಗರಾಳ, ಸಿದ್ದಪ್ಪ ಕೊಟ್ಟಲಗಿ, ಹೊನ್ನಕೆರಪ್ಪ ತೇಲಗಿ, ಸದಾಶಿವ ಬರಟಗಿ ಸೇರಿದಂತೆ ಮುಂತಾದವರು ಇದ್ದರು.