ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಿ

| Published : Jun 26 2024, 12:36 AM IST

ಸಾರಾಂಶ

ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಪರಿಶೀಲಿಸಿ ತುರ್ತು ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಶಾಸಕ ವಿಠ್ಠಲ ಕಟಕಧೋಂಡ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಡಚಣ

ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಪರಿಶೀಲಿಸಿ ತುರ್ತು ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸವಾಗಬೇಕು ಎಂದು ಅಧಿಕಾರಿಗಳಿಗೆ ಶಾಸಕ ವಿಠ್ಠಲ ಕಟಕಧೋಂಡ ಸೂಚನೆ ನೀಡಿದರು.

ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾದ ಚಡಚಣ ತಾಲೂಕಿನ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಾರ್ವಜನಿಕರಿಂದ ಸ್ಪಂದಿಸುವ ಮೂಲಕ ಅಧಿಕಾರಿಗಳು ಹಾಗೂ ಇಲಾಖೆಯ ಮೇಲೆ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು. ಮೊದಲ ಹಂತದ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಬೇಕು ಎಂದರು.

ಜಿಲ್ಲಾಧಿಕಾರಿ ಟಿ ಭುಬಾಲನ್ ಮಾತನಾಡಿ, ಜನಸ್ಪಂದನ ಸರಕಾರದ ಮಹತ್ವದ ಕಾರ್ಯ ಕ್ರಮವಾಗಿದ್ದು, ಅರ್ಜಿಗಳು ತುರ್ತಾಗಿ ಇತ್ಯರ್ಥಗೊಳ್ಳಬೇಕು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೆ ಮನವಿ:

6 ತಿಂಗಳ ಹಿಂದೆ ನಡೆದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ವಾರ್ಡ್‌ದಲ್ಲಿ ಅಲೆದಾಡದಂತಾಗಿದೆ. ಅಭಿವೃದ್ಧಿಗಾಗಿ ಮತದಾರರು ಒತ್ತಾಯಿಸುತ್ತಿದ್ದಾರೆ. ಆದಷ್ಟು ಬೇಗನೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯ ಆದೇಶ ಹೊರಡಿಸಿ ಅಧ್ಯಕ್ಷರ ಆಯ್ಕೆಯಾಗಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ವಿಷಯ ಸರಕಾರದ ಹಂತದಲ್ಲಿದೆ. ಸರಕಾರಕ್ಕೆ ತಮ್ಮ ಬೇಡಿಕೆಯನ್ನು ಕಳುಹಿಸಲಾಗುವುದು ಎಂದರು.

ಕುಡಿವ ನೀರಿನ ಸಮಸ್ಯೆ ಪರಿಹರಿಸಿ:

₹500 ಕೋಟಿಗಳ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಬೇಕು. ತಾಲೂಕು ಅಭಿವೃದ್ಧಿ ಸಮಿತಿಯ ಸದಸ್ಯರು ತಾಲೂಕು ಘೋಷಣೆಯಾಗಿ 10 ವರ್ಷಗಳಾಗುತ್ತಾ ಬಂದಿದೆ. ಇಲ್ಲಿಯವರೆಗೆ ಪ್ರಮುಖ ಕಚೇರಿಗಳಾದ ಸಬ್‌ ರಜಿಸ್ಟರ್‌ ಕಚೇರಿ, ತೋಟಗಾರಿಕಾ ಇಲಾಖೆ, ಬಸ್‌ ಡಿಪೋ, ಅಗ್ನಿಶಾಮಕ ಠಾಣೆ, ಕೋರ್ಟ್‌ ಸೇರಿದಂತೆ ಇನ್ನೀತರ ಕಚೇರಿಗಳು ಕಾರ್ಯಾರಂಭವಾಗಿಲ್ಲ. ಕೂಡಲೇ ಕಾರ್ಯನಿರ್ವಹಿಸುವಂತಾಗಬೇಕು ಎಂದು ಆಗ್ರಹಿಸಿದ ಅವರು, ಪಟ್ಟಣದಲ್ಲಿ ಕುಡಿಯುವ ನೀರು ತಿಂಗಳಿಗೊಮ್ಮೆ ಬರುತ್ತಿವೆ. ಅದನ್ನು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಆಗ್ರಹಿಸಿದರು.

ಶಾಲಾ-ಕಾಲೇಜುಗಳು ಕಾರ್ಯಾರಂಭಕ್ಕೆ ಒತ್ತಾಯ:

ಕೆಎಸ್ಆರ್‌ ಪಕ್ಷದ ಕಾರ್ಯಕರ್ತರು ತಾಲೂಕಿನಲ್ಲಿ ಸರಕಾರಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಮಂಜೂರಾದರೂ ಬೇರೆಡೆ ಸ್ಥಳಾಂತರಗೊಳ್ಳುತ್ತಿವೆ. ಇದರಿಂದ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾಗತ್ತಿದೆ. ಕೂಡಲೇ ಮುಂದಿನ ಶೈಕ್ಷಣಿಕ ವರ್ಷದೊಳಗಾಗಿ ಶಾಲಾ-ಕಾಲೇಜುಗಳು ಕಾರ್ಯಾರಂಭಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನಾದ್ಯಂತ ರೈತರು ತಮ್ಮತಮ್ಮ ಹೊಲಗದ್ದೆಗಳಿಗೆ ಹೋಗಲು ರಸ್ತೆ ಮಾಡಿಕೊಡಲು ಒತ್ತಾಯಿಸಿದರು. ಕೆಲವರು ತಮ್ಮ ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಅಹವಾಲುಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಎಸ್ಪಿ ಋಷಿಕೇಶ ಸೋನಾವಣೆ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಸಿ.ಬಿ.ಕುಂಬಾರ, ಇಂಡಿ ಉಪ ವಿಭಾಗ ಅಧಿಕಾರಿ ಅಬೀದ್ ಗದ್ಯಾಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ, ತಹಸೀಲ್ದಾರ್ ಸಂಜಯ ಇಂಗಳೆ, ಪಂಡಿತ್ ಕೊಡಹೊನ್ನ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

----

ಬಾಕ್ಸ್‌

ಒಂದೇ ಬಸ್‌ನಲ್ಲಿ ಬಂದ ಅಧಿಕಾರಿಗಳು

ಜಿಲ್ಲೆಯ ಎಲ್ಲ ಹಂತದ ಅಧಿಕಾರಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರೆತರುವುದರ ಜೊತೆಯಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿರುವುದರಿಂದ ಕಾರ್ಯಕ್ರಮ ಕಾರ್ಯಾರಂಭವಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಅಧಿಕಾರಿಗಳು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ, ಖಾಸಗಿ ವಾಹನಗಳಲ್ಲಿಯೋ ಅಥವಾ ಬಸ್‌ಗಳ ಮೂಲಕ ಬರುವುದರಿಂದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಗುತ್ತಿರುವುದಿಲ್ಲವೆಂದು ಮನಗಂಡ ಜಿಲ್ಲಾಧಿಕಾರಿಗಳು ಒಂದೇ ಬಸ್‌ನಲ್ಲಿ ಕರೆತಂದು ಸಮಯ ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

---

152 ಅರ್ಜಿ ಸ್ವೀಕಾರ

ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 152 ಅರ್ಜಿ ಬಂದಿವೆ. ಅದರಲ್ಲಿ ಕೆಲ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಅರ್ಜಿಗಳು ಮಾತ್ರ ಸ್ಥಳದಲ್ಲಿ ವಿಲೇವಾರಿಯಾಗಿವೆ. ಆದರೆ ಶೇ. 90ರಷ್ಟು ಅರ್ಜಿಗಳು ಸ್ಥಳದಲ್ಲಿ ವಿಲೇವಾರಿಯಾಗದ ಅರ್ಜಿಗಳು ಇದ್ದ ಕಾರಣ ಆಯಾ ಇಲಾಖೆಯ ಅಧಿಕಾರಿಗಳಿಗೆ 15 ರಿಂದ ಒಂದು ತಿಂಗಳಗಳ ಕಾಲ ಕಾಲಾವಕಾಶದಲ್ಲಿ ಈ ಅರ್ಜಿಗಳುಗಳನ್ನು ಪೂರ್ಣ ಪ್ರಮಾಣದಲ್ಲಿ ವಿಲೇವಾರಿಯಾಗಬೇಕು ಎಂದು ತಾಲೂಕು ಹಾಗೂ ಜಿಲ್ಲಾ ಹಂತದ ಅಧಿಕಾರಿಗಳಿಗೆ ಸೂಚಿಸಿದರು.