ರೈತರಿಗೆ ಬೀಜ, ರಸ ಗೊಬ್ಬರ ಒದಗಿಸಿ: ಶಾಸಕ ಬಿ.ಜಿ.ಗೋವಿಂದಪ್ಪ

| Published : Jun 15 2024, 01:10 AM IST

ಸಾರಾಂಶ

ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತ ಸಭೆ ಹಾಗೂ ಸುರಕ್ಷಿತ ಕೀಟನಾಶಗಳ ಬಳಕೆ ಬಗ್ಗೆ ಕಾರ್ಯಗಾರದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸರ್ಕಾರದಿಂದ ಬರುವ ಪಡಿತರ ವಿತರಣೆ ಮತ್ತು ರೈತರಿಗೆ ಸಾಲ ಸೌಲಭ್ಯ ನೀಡುವುದಷ್ಟೇ ಕೃಷಿ ಪತ್ತಿನ ಸಹಕಾರ ಸಂಘಗಳ ಕೆಲಸವಲ್ಲ. ಅದಕ್ಕೆ ಪೂರಕವಾಗಿ ರೈತರಿಗೆ ಬೇಕಾದ ಬೀಜ, ಗೊಬ್ಬರ ಒದಗಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ ಗೋವಿಂದಪ್ಪ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 2024-25ನೇ ಸಾಲಿನ ಕೃಷಿ ಪರಿಕರ ಮಾರಾಟಗಾರರಿಗೆ ಜಾಗೃತ ಸಭೆ ಹಾಗೂ ಸುರಕ್ಷಿತ ಕೀಟನಾಶಗಳ ಬಳಕೆ ಬಗ್ಗೆ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಬಾರಿ ಹವಾಮಾನ ವ್ಯತಿರಿಕ್ತವಾಗಿತ್ತು. ಈ ಬಾರಿ ಪೂರಕವಾಗಿದೆ. ಹಿಂದೆ ಮಳೆಯ ನಕ್ಷತ್ರ ನೋಡಿ ಬೀಜ ಬಿತ್ತುವ ಸಾಂಪ್ರದಾಯಿಕ ಪದ್ಧತಿ ನಮ್ಮಲ್ಲಿ ಇತ್ತು. ಆದರೆ ಇಂದು ರೈತರು ಅದನ್ನು ಮರೆತುಬಿಟ್ಟಿದ್ದಾರೆ. ಹಳೆ ಪದ್ಧತಿಯಂತೆ ರೈತರು ಕೃಷಿ ಮಾಡಿದರೆ ವರ್ಷಕ್ಕೆ ಎರಡು ಬೆಳೆ ತೆಗೆಯಬಹುದು ಎಂದರು.

ಕೃಷಿ ಪತ್ತಿನ ಸಹಕಾರ ಸಂಘಗಳ ಎಲ್ಲಾ ಸಿಇಒ ಕೃಷಿ ಇಲಾಖೆಯಲ್ಲಿ ನೀಡುತ್ತಿರುವ ಗೊಬ್ಬರಗಳ ನಿರ್ವಹಣೆ ಬಗ್ಗೆ ಕಡ್ಡಾಯವಾಗಿ ತರಬೇತಿ ಹೊಂದಿ ಬೀಜ ಮತ್ತು ಗೊಬ್ಬರ ವಿತರಣೆ ಮಾಡುವ ಪರವಾನಗಿ ಪಡೆದು ಕಡ್ಡಾಯವಾಗಿ ರೈತರಿಗೆ ಬೀಜ ಮತ್ತು ಗೊಬ್ಬರ ವಿತರಣೆ ಮಾಡುವ ಕಾರ್ಯ ಮಾಡಬೇಕು. ವಿತರಣೆ ಸಮಯದಲ್ಲಿ ನಿಮಗೆ ಏನೇ ತೊಂದರೆಯಾದರೂ ಅದಕ್ಕೆ ಇಲಾಖೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.

ಗೋದಾಮು ನಿರ್ಮಾಣ, ಬೀಜ ಗೊಬ್ಬರ ಖರೀದಿಗೆ ಬೇಕಾದ ಆರ್ಥಿಕ ಸಹಾಯವನ್ನು ಡಿಸಿಸಿ ಬ್ಯಾಂಕ್ ಮೂಲಕ ಮಾಡಿಸಲಾಗುವುದು. ಸಂಘದವರು ಸ್ಥಳೀಯ ನಿರ್ದೇಶಕರನ್ನಾಗಲಿ, ನಮ್ಮನ್ನಾಗಲಿ ಭೇಟಿ ಮಾಡಿದರೆ ನಿಮಗೆ ಬೇಕಾದ ಅನುಕೂಲತೆ ಕಲ್ಪಿಸಲಾಗುವುದು ಎಂದರು.

ರೈತರಿಗೆ ತಮ್ಮ ಜಮೀನಿನ ಗುಣ ಧರ್ಮಗಳ ಬಗ್ಗೆ ಅರಿವಿನ ಕೊರತೆಯಿದ್ದು ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ತೆರಳಿ ಮಣ್ಣು ಪರೀಕ್ಷೆ ಮಾಡಿಸುವ ಮೂಲಕ ಅಗತ್ಯ ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ ಶಾಸಕರು ತಾಲೂಕಿನ ಯಾವುದಾದರೂ ಒಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಸ ಗೊಬ್ಬರಗಳ ಬಳಕೆ ಬಗ್ಗೆ ಪ್ರತ್ಯಕ್ಷತೆ ನಡೆಸಿಕೊಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಆಧುನಿಕ ಕೃಷಿ ಕಡೆ ಬಂದಿದ್ದೇವೆ. ಸಂಪನ್ಮೂಲಗಳ ಸುದ್ಬಳಕೆಯಾದಾಗ ಮಾತ್ರ ಉತ್ಪಾದನೆ ಹೆಚ್ಚಿಸಲು ಸಾಧ್ಯ ಎಂದರು.

ಹೊಸದುರ್ಗ ತಾಲೂಕಿನಲ್ಲಿ ವೈವಿಧ್ಯಮ ಬೆಳೆ ಕಾಣುತ್ತೇವೆ. ಜಾಗತಿಕ ಮಟ್ಟದಲ್ಲಿ ಹವಮಾನ ವೈಪರೀತ್ಯದಿಂದಾಗಿ ಬೆಳೆಗಳಲ್ಲೂ ಬದಲಾವಣೆಯಾಗುತ್ತಿವೆ. ಹೊಸದುರ್ಗದಲ್ಲಿ ಸಿರಿಧಾನ್ಯ ಬೆಳೆಯಾದ ಸಾವೆ ಬೆಳೆ 6,000 ಹೇಕ್ಟೆರ್ ಪ್ರದೇಶದಿಂದ ಈಗ 25,000 ಹೇಕ್ಟೆರ್ ಪ್ರದೇಶಕ್ಕೆ ವಿಸ್ತಾರಗೊಂಡಿದ್ದು ಆದಾಯ ಬರುವ ರೀತಿಯಲ್ಲಿ ಬೆಳೆ ಪದ್ಧತಿ ಜಾರಿಗೆ ತರಲು ಇಲಾಖೆ ಮುಂದಾಗಿದೆ ಎಂದರು.

ಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಜುನಾಥ್ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘದವರಿಗೆ ರೈತರ ಪರ ಕೆಲಸ ಮಾಡುವ ಇಚ್ಛೆ ಇದ್ದಂತೆ ಕಾಣುತ್ತಿಲ್ಲ. ಡಿಸಿಸಿ ಬ್ಯಾಂಕ್ ಆರ್ಥಿಕ ನೆರವು ನೀಡಲು ಸಿದ್ಧವಿದ್ದರೂ ಅದರ ಸದ್ಬಳಕೆ ಸಂಘದವರು ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚಂದ್ರಶೇಖರಪ್ಪ, ತಾಪಂ ಇಒ ಸುನಿಲ್ ಕುಮಾರ್, ಜಾಗೃತದಳದ ಅಧಿಕಾರಿ ಮದನ ಗೌಡ, ಟಿಎಪಿಎಂಎಸ್ ಅಧ್ಯಕ್ಷ ಕಾರೆಹಳ್ಳಿ ಬಸವರಾಜ್, ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್.ಈಶ ಸೇರಿದಂತೆ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಖಾಸಗಿ ವಿತರಕರು ಹಾಜರಿದ್ದರು.

ಡಿಎಪಿ ಮತ್ತು ಯೋರಿಯಾ ಗೊಬ್ಬರ ಜೊತೆಗೆ ರೈತರಿಗೆ ಅಗತ್ಯವಿಲ್ಲದ ಪೋಷಕಾಂಶಗಳನ್ನು ಲಿಂಕ್ ರೂಪದಲ್ಲಿ ಕೊಡುತ್ತಿರುವುದರಿಂದ ರೈತರಿಗೆ ಗೊಬ್ಬರದ ಬೆಲೆ ಹೆಚ್ಚಾದಂತೆ ಕಾಣುತ್ತದೆ. ಗೊಬ್ಬರ ಖರೀದಿ ವೇಳೆ ಮಾಡುವ ಲಿಂಕ್ ವ್ಯವಸ್ಥೆ ತಪ್ಪಿಸಿ. ಇದರಿಂದ ರೈತರಿಗೂ ಅನುಕೂಲ, ವರ್ತಕರಿಗೂ ಅನುಕೂಲ

ತ್ಯಾಗರಾಜ್, ಖಾಸಗಿ ವಿತರಕ, ಹೊಸದುರ್ಗ

ಗೊಬ್ಬರ ಖರೀದಿಸಲು ಪತ್ತಿನ ಸಹಕಾರ ಸಂಘಗಳಲ್ಲಿ ಆರ್ಥಿಕ ಸಮಸ್ಯೆ ಇದೆ. ರೈತರು ಸುಸ್ತಿ ಸಾಲಗಾರರಾಗಿರುವುದರಿಂದ ಸಂಘಕ್ಕೆ ಬರುವ ಆದಾಯವನ್ನು ಡಿಸಿಸಿ ಬ್ಯಾಂಕಿನವರು ಸಾಲದ ಹಣಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕ ನೆರವು ಕೇಳಿದರೂ ಕೊಡುತ್ತಿಲ್ಲ. ಹೀಗಾಗಿ ಪತ್ತಿನ ಸಂಘಗಳಲ್ಲಿ ಗೊಬ್ಬರ ಶೇಖರಣೆ ಮಾಡಲಾಗುತ್ತಿಲ್ಲ.

ಪರಮೇಶ್, ಸಿಇಒ ದೇವಪುರ ಕೃಷಿ ಪತ್ತಿನ ಸಹಕಾರ ಸಂಘ