ಸಾರಾಂಶ
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಪಟ್ಟಣದ ಜನತೆಗೆ ನಿತ್ಯ ಶುದ್ಧ ನೀರೊದಗಿಸುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಪರಿಶೀಲಿಸಿದರು.ಹಿಲ್‌ಟಾಪ್ ಕಾಲೊನಿಯಲ್ಲಿ ನಿರ್ಮಾಣವಾದ ಬೃಹತ್ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪ್ರತಿ ಹಂತದ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಈ ಘಟಕದಿಂದ ವಿವಿಧೆಡೆ ಇರುವ ಓವರ್ ಹೆಡ್ ಟ್ಯಾಂಕರ್‌ಗೆ ತೆರಳುವ ಶುದ್ಧ ನೀರಿಗೆ ಗುಂಡಿ ಒತ್ತುವ ಮೂಲಕ ಪ್ರಾಯೋಗಿಕ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಟ್ಟಣ ಜನತೆಯ ಬಹು ದಿನಗಳ ಬೇಡಿಕೆಯಾದ ಶುದ್ಧ ಕುಡಿಯುವ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮಂಗಳವಾರ ಜನತೆಗೆ ಈ ಘಟಕದಿಂದ ನಿತ್ಯ ನೀರು ಒದಗಿಸುವಂತೆ ಸೂಚನೆ ನೀಡಿದ್ದು ಅಧಿಕಾರಿಗಳು ಇಂದಿನಿಂದಲೆ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.ಕೃಷ್ಣಾ ನದಿಯಿಂದ ಅಮೃತ-2 ಯೋಜನೆಯಲ್ಲಿ ನಿರಂತರ ನೀರು ಒದಗಿಸುವ ಕಾರ್ಯ ಈಗಾಗಲೆ ಪ್ರಾರಂಭವಾಗಿದ್ದು, ಇಲ್ಲಿಯೆ ಬೃಹತ್ ಟ್ಯಾಂಕ ನಿರ್ಮಾಣವಾಗುತ್ತಿದೆ. ಸುಮಾರು 40 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ಯೋಜನೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ನಗರ ನೀರು ಸರಬರಾಜು ಮಂಡಳಿಯ ಎಂಜಿನಿಯರ್‌ಗಳಾದ ರಾಜಕುಮಾರ, ಶಂಕರಗೌಡ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಮುಖಂಡರಾದ ಮರಿಗೌಡ ಹುಲಕಲ್, ಬಾಪುಗೌಡ ಪಾಟೀಲ್, ಬಸನಗೌಡ ಯಾಳಗಿ ಇದ್ದರು.