ಸಾರಾಂಶ
ತಾವು ನಗರಸಭೆ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದು ಸೂಕ್ತ ಕ್ರಮ ಜರುಗಿಸದೆ ದಿನಾಂಕ ನಿಗದಿಪಡಿಸದೆ ಸದಸ್ಯರ ಹಕ್ಕು ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿರುವುದು ಜನಪ್ರತಿನಿಧಿಗಳಿಗೆ ಅವಮಾನಿಸಿದಂತಾಗುತ್ತಿದೆ
ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಹೈಕೋರ್ಟ ಸಮ್ಮತಿ ನೀಡಿದ್ದರಿಂದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿಪಡಿಸಿರುವ ಬಗ್ಗೆ ಲಿಖಿತ ಮಾಹಿತಿ ಒದಗಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ನೇತೃತ್ವದಲ್ಲಿ ನಗರಸಭೆ ಸದಸ್ಯರು, ಮುಖಂಡರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, 9-1-2025 ರಂದು ಹೈಕೋರ್ಟನ ದೃಢೀಕರಣ ಆದೇಶದೊಂದಿಗೆ ಅರ್ಜಿ ಸಲ್ಲಿಸಲಾಗಿತ್ತು, ಆದರೆ ತಾವು ವಿನಾಕಾರಣ ಕಾಲ ಹರಣ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಹೈಕೋರ್ಟನಲ್ಲಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ 18 ಪ್ರಕರಣಗಳಲ್ಲಿ ಅಂದಾಜು 17 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೇ ಪೂರ್ಣಗೊಂಡಿದೆ.ಆದರೆ ತಾವು ನಗರಸಭೆ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದು ಸೂಕ್ತ ಕ್ರಮ ಜರುಗಿಸದೆ ದಿನಾಂಕ ನಿಗದಿಪಡಿಸದೆ ಸದಸ್ಯರ ಹಕ್ಕು ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿರುವುದು ಜನಪ್ರತಿನಿಧಿಗಳಿಗೆ ಅವಮಾನಿಸಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿಗಳು, ಈ ಪ್ರಕರಣ ಬಗ್ಗೆ ಕಾನೂನಿನ ಪ್ರಕಾರ ನಿಗದಿತ ಸಮಯದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ನಗರಸಭೆ ಸದಸ್ಯರಾದ ವಿನಾಯಕ ಮಾನ್ವಿ,ಅನಿಲ ಅಬ್ಬಿಗೇರಿ, ಮುತ್ತು ಮುಶಿಗೇರಿ, ಚಂದ್ರು ತಡಸದ, ನಾಗರಾಜ ತಳವಾರ, ಮಹಾಂತೇಶ ಶಲವಡಿ, ಉಷಾ ಮಹೇಶ ದಾಸರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ರಾಘು ಯಳವತ್ತಿ, ಪ್ರಕಾಶ ಅಂಗಡಿ, ಸುಧೀರ ಕಾಟಿಗರ, ಬಿಜೆಪಿ ಕಾರ್ಯಕರ್ತರಾದ ಮಹೇಶ ದಾಸರ, ಪ್ರಶಾಂತ ನಾಯ್ಕರ, ರಮೇಶ ಸಜ್ಜಗಾರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.