ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಗುರುಮಠಕಲ್ ಮತಕ್ಷೇತ್ರದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಈ ಭಾಗದ ಜನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡುವುದಾಗಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಹೇಳಿದರು.ತಾಲೂಕಿನ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ, 2023-24ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರ ಯೋಜನೆಯಡಿಯಲ್ಲಿ ನಡೆದ ಸರ್ಕಾರಿ ಆಸ್ಪತ್ರೆಗೆ 1.09 ಕೋಟಿ ರೂ. ವೆಚ್ಚದಲ್ಲಿ ಕಂಪೌಂಡ್ ನಿರ್ಮಾಣ, ಮುಖ್ಯ ರಸ್ತೆಯಿಂದ ಆಸ್ಪತ್ರೆಗೆ ತೆರಳಲು 30 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ, ಚರಂಡಿ ಹಾಗೂ ಎಸ್.ಟಿ ವಾರ್ಡನಲ್ಲಿ 20 ಲಕ್ಷ ರು. ಗಳ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ನಮ್ಮ ತಂದೆ ದಿ. ನಾಗನಗೌಡ ಕಂದಕೂರ ಶಾಸಕರಾಗಿದ್ದ ಅವಧಿಯಲ್ಲಿ ಹೋಬಳಿ ಕೇಂದ್ರವಾಗಿರುವ ಈ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ, ತಾಂಡಾಗಳ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಕಲ್ಪಿಸಲು 3.50 ಕೋಟಿ ರು. ಗಳ ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಹಾಗೂ ವೈದ್ಯರು, ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ಕ್ರಮ ಕೈಗೊಂಡರು. ಅದು ಕೆಲವು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು.ಗ್ರಾಮದ ಪ್ರೌಢಶಾಲೆಗೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗಲು 18 ಲಕ್ಷ ರು. ಗಳ ಅದರಂತೆ ಪಿಯು ಕಾಲೇಜಿಗೆ 8 ಲಕ್ಷ ರು.ಗಳ ಅನುದಾನ ನೀಡಿದ್ದೇನೆ. ಅದರ ಸದ್ಭಳಕೆ ವಿದ್ಯಾರ್ಥಿಗಳು ಮಾಡಿಕೊಂಡು ಪರಿಶ್ರಮದಿಂದ ಅಭ್ಯಾಸ ಮಾಡಿ, ನೀವು ಕಂಡ ಕನಸು ನನಸು ಮಾಡಿಕೊಳ್ಳಲು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಇನ್ನೂ ಅಲ್ಲಲ್ಲಿ ಬಾಲ್ಯವಿವಾಹ ಘಟನೆಗಳು ಜರುಗುತ್ತಿವೆ. ಕಾರಣ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಗಮನಿಸಿ, ವಿವಾಹ ನಡೆಯದಂತೆ ಮೇಲಧಿಕಾರಿಗಳಿಗೆ ಗಮನಕ್ಕೆ ತರುವ ಮೂಲಕ ಅನೀಷ್ಟ ಪದ್ದತಿ ನಿರ್ಮೂಲನೆ ಮಾಡಲು ಎಚ್ಚರಿಕೆ ವಹಿಸಿರಿ ಎಂದು ಸೂಚಿಸಿದರು.ಯಾದಗಿರಿ-ಸೇಡಂ ರಾಜ್ಯ ಹೆದ್ದಾರಿ ರಸ್ತೆ ಮೇಲೆ ಅತೀ ಹೆಚ್ಚು ಭಾರಿ ವಾಹನಗಳು ಓಡಾಡುತ್ತಿವೆ. ಇದರಿಂದ ರಸ್ತೆ ಕೂಡ ಹಾಳಾಗುತ್ತಿದೆ. ಅಲ್ಲದೇ ಸೌದಾಗಾರ ಕ್ರಾಸ್ ಬಳಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ, ಪ್ರಾಣ ಹಾನಿ ಆಗುತ್ತಿವೆ. ಕಾರಣ ರಸ್ತೆ ಸುಧಾರಣೆಗೆ 6 ಕೋಟಿ ರು. ಗಳ ಮಂಜೂರು ಮಾಡಿಸಿದ್ದೇನೆ. ಪೊಲೀಸ್ ಅಧಿಕಾರಿಗಳು ಹಾಗೂ ಸಾರಿಗೆ ಅಧಿಕಾರಿಗಳು ಭಾರೀ ವಾಹನಗಳ ತಪಾಸಣೆ ಮಾಡಿ, ಓಡಾಟಕ್ಕೆ ಕಠಿಣ ಕ್ರಮ ವಹಿಸಲು ತಿಳಿಸಿದರು.
ಪ್ರಾಸ್ತಾವಿಕವಾಗಿ ಆರೋಗ್ಯಾಧಿಕಾರಿ ಡಾ. ಹಣಮಂತರಡ್ಡಿ ಮದ್ನಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಅಮೀನ್ ರಡ್ಡಿ ಬಿಳ್ಹಾರ, ನಿರ್ಮಿತಿ ಕೇಂದ್ರದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿರಣಕುಮಾರ, ಉಪತಹಸೀಲ್ದಾರ್ ಸೋಮನಾಥ, ಆಸ್ಪತ್ರೆ ಆಡಳಿತಾಧಿಕಾರಿ ಮುದಾಷಿರ್ ಅಹ್ಮದ್, ಹಿರಿಯ ಮುಖಂಡರಾದ ಭೋಜಣ್ಣಗೌಡ ಯಡ್ಡಳ್ಳಿ, ಮಲ್ಲರಡ್ಡಿಗೌಡ ಮಾಲಿಪಾಟೀಲ್, ವಿಜಯಕುಮಾರ ದಿಬ್ಬಾ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ರಾಮಣ್ಣ ಕೊಟಗೇರಾ, ಅಂಬ್ರೀಶಗೌಡ ಬಂದಳ್ಳಿ, ಲಿಂಗಾರಡ್ಡಿ ಯಡ್ಡಳ್ಳಿ, ರವಿ ಮಾಲಿಪಾಟೀಲ್ ಇತರರಿದ್ದರು.;Resize=(128,128))
;Resize=(128,128))