ಸಾರಾಂಶ
ಕೂಡ್ಲಿಗಿ: ಕ್ಷೇತ್ರದಲ್ಲಿ ಯಾವುದೇ ಭಾಗದ ಹಳ್ಳಿಗಳಿಗೆ ನಾನು ಮಲತಾಯಿ ಧೋರಣೆ ಅನುಸರಿಸಿಲ್ಲ. ಎಲ್ಲ ಹಳ್ಳಿಗಳು ಒಂದೇ. ಹೀಗಾಗಿ ಉಜ್ಜಿನಿ, ಕಾಳಾಪುರ, ತೂಲಹಳ್ಳಿ ಭಾಗದ ಗಡಿಗ್ರಾಮದ ಹಳ್ಳಿಗಳಿಗೆ ಆದ್ಯತೆ ನೀಡಿರುವೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.ಅವರು ಕೂಡ್ಲಿಗಿ ಕ್ಷೇತ್ರದ ಉಜ್ಜಿನಿ ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಂತರ ಕೂಡ್ಲಿಗಿ ಕ್ಷೇತ್ರದ ಕಾಳಾಪುರ ಗ್ರಾಪಂ ಹಾಗೂ ಉಜ್ಜಿನಿ ಗ್ರಾಪಂ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ಶಾಸಕರು ಗುಡೇಕೋಟೆ ಭಾಗಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂಬ ಅಸಮಾಧಾನ ಈ ಭಾಗದ ಕೆಲವರಿಗೆ ಇತ್ತು. ಈಗ ಅದನ್ನು ಸುಳ್ಳು ಮಾಡಿರುವೆ. ಉಜ್ಜಿನಿ ಜಿಪಂ ಅಭಿವೃದ್ಧಿಗಾಗಿ ಹೆಚ್ಚು ಅನುದಾನ ತಂದಿರುವೆ. ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ₹5.50 ಕೋಟಿ ತಂದಿರುವೆ. ಗ್ರಾಮದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ತಂದಿರುವೆ. ತಾಲೂಕಿನ ₹70 ಕೋಟಿ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಮೀಸಲು ಇಟ್ಟಿದ್ದೇವೆ. ತಾಲೂಕಿನ 180 ಶಾಲೆಗಳ ಅಭಿವೃದ್ಧಿಗೆ ಅನುದಾನ ತಂದಿರುವೆ. ಗಂಡಬೊಮ್ಮನಹಳ್ಳಿ ಕೆರೆ ಮತ್ತು ವಿವಿಧ ತಳಿಯ ಮೀನುಗಾರಿಕೆಯ ಅಭಿವೃದ್ಧಿಗೆ ₹4 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಶಾಸಕರ ಸಂಪರ್ಕ ಕಚೇರಿ ತೆರೆದು ಅಭಿವೃದ್ಧಿಗೆ ಗಮನ ಹರಿಸುವೆ. ಸಮಾಜಕ್ಕೆ ಒಳ್ಳೆಯ ವಿದ್ಯಾವಂತರು ಶಾಸಕರಾಗಬೇಕು ಎನ್ನುವ ನಿಮ್ಮ ಬಹುದಿನಗಳ ಕನಸು ಈಗ ಈಡೇರಿದೆ. ಅಂತವರನ್ನು ನೀವು ಇಷ್ಟ ಪಟ್ಟು ಆರಿಸಿಕೊಂಡಿದ್ದೀರಿ. ಅದಕ್ಕೆ ನಾನು ತಕ್ಕನಾಗಿ ಮುಂದಿನ ದಿನಗಳಲ್ಲಿ ಉತ್ತರವಾಗಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಸಾವಜ್ಜಿ ರಾಜೇಂದ್ರ ಪ್ರಸಾದ್, ತೂಲಹಳ್ಳಿ ಶಾಂತನಗೌಡ, ಕೆ.ಎಂ. ಶಶಿಧರ, ಉಜ್ಜಿನಿ ಅಂಜಿನಪ್ಪ, ಚಂದ್ರಶೇಖರಪುರದ ಬಸವರಾಜ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಜನತೆ ಇದ್ದರು.