ಸಾರಾಂಶ
ಶಾಂತಲಾ ಮಹಿಳಾ ಕಾಲೇಜಲ್ಲಿ ಮಹಿಳಾ ದಿನಕನ್ನಡಪ್ರಭ ವಾರ್ತೆ ಬೇಲೂರು
ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ವೈ.ಸಿ.ಸಿದ್ದೇಗೌಡ ಹೇಳಿದರು.ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲೂಕು ಘಟಕದಿಂದ ಪಟ್ಟಣದ ಶಾಂತಲಾ ಮಹಿಳಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಎಲ್ಲಾ ಸಾಹಿತ್ಯಕ್ಕೆ ಅಡಿಪಾಯವಾಗಿದೆ. ವಿಶೇಷವಾಗಿ ಜಾನಪದದ ಮೂಲ ಸಂಸ್ಕೃತಿಗೆ ಮಹಿಳೆಯರ ಕೊಡುಗೆ ಅಪಾರವಾಗಿದ್ದು ಜಾನಪದ ಪರಿಷತ್ತು ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಸಮಾಜಸೇವಕಿ ಸೌಮ್ಯ ಅನಂದ್ ಮಾತನಾಡಿ, ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾಳೆ. ಆದರೆ ಈಗಲೂ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಅಮಾನವೀಯ ಘಟನೆ ತಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅದ್ದರಿಂದ ಮಹಿಳೆಯರು ಉನ್ನತ ವ್ಯಾಸಂಗ ಮಾಡುವ ಮೂಲಕ ಸ್ವಾವಲಂಭಿ ಜೀವನಕ್ಕೆ ನಾಂದಿ ಹಾಡಬೇಕು ಎಂದರು.ಪತ್ರಕರ್ತ ಹೆಬ್ಬಾಳು ಹಾಲಪ್ಪ ಮಾತನಾಡಿ, ೧೨ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನ ಸಮಾನತೆ ನೀಡಿ ಗೌರವಿಸಿದ್ದಾರೆ. ಆದರೆ ಅಧುನಿಕ ಸಮಾಜದಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ಬೇಸರದ ವಿಷಯ ಎಂದರು.
ಶಾಂತಲಾ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ.ಛಾಯಾ ಎಸ್.ಕುಮಾರ್, ಎಚ್.ಮಲ್ಲಾಪುರ ಸಹ ಶಿಕ್ಷಕಿ ಕೆ.ಎನ್.ಲೀಲಾವತಿ, ನಿವೃತ್ತ ಸಹ ಶಿಕ್ಷಕಿ ಎಂ.ಶಶಿಕಲಾ, ಸಾಹಿತಿ ಇಂದಿರಮ್ಮ ಜಾನಪದ ಮತ್ತು ಅಧುನಿಕ ಮಹಿಳೆಯ ಬಗ್ಗೆ ಮಾತನಾಡಿದರು.ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಧನಂಜಯ್, ಉಪನ್ಯಾಸಕ ಮೋಹನ್, ಸುಜಯ್ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.ಕರ್ನಾಟಕ ಜಾನಪದ ಪರಿಷತ್ತು ಬೇಲೂರು ತಾಲೂಕು ಘಟಕದಿಂದ ಶಾಂತಲಾ ಮಹಿಳಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.