ಸಾರಾಂಶ
ಪರೀಕ್ಷಾ ಅಕ್ರಮ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ: ರಾಜೂಗೌಡ
ಕನ್ನಡಪ್ರಭ ವಾರ್ತೆ ಯಾದಗಿರಿ
2021ರಲ್ಲಿ ನಡೆದ 545 ಪಿಎಸೈ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ಸಾಬೀತು ಆಗಿರುವ ಹಿನ್ನೆಲೆ ಯಾವುದೇ ಶುಲ್ಕ ವಿಧಿಸದಂತೆ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಹೇಳಿದರು.ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆ ಆದವರಿಗೆ ಇದರಿಂದ ತೊಂದರೆಯಾಗಿದೆ ನಿಜ. ಆದರೆ, ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆಬಾಗಬೇಕು ಎಂದರು. ನಮ್ಮ ಸರ್ಕಾರ ಇದ್ದಾಗ ಮೊದಲು ಪತ್ರ ಬರೆದವರೇ ನಾವು, ಈ ಬಗ್ಗೆ ಸಾಕಷ್ಟು ಪತ್ರ ಬರೆದು ದೂರವಾಣಿ ಮೂಲಕ ಮಾತನಾಡಿ ಹೇಳಿದ್ದೇ ಎಂದ ಅವರು, ಈ ಹಿಂದೆ ಪಿಎಸೈ ಪರೀಕ್ಷೆ ಅಕ್ರಮ ನಡೆದಾಗ ಪ್ರಿಯಾಂಕ ಖರ್ಗೆ ಅವರಿಗೆ ಬಹಳ ಆಸಕ್ತಿ ಇತ್ತು. ಆದರೆ, ಈಗ ಅಧಿಕಾರಕ್ಕೆ ಬಂದ ಮೇಲೆ ಯಾಕೆ ನಿರಾಸಕ್ತಿ ತೋರಿಸುತ್ತಿದ್ದಾರೆ ಅಂತ ನನಗೆ ಚಿಂತೆಯಿದೆ ಎಂದು ಕಿಡಿ ಕಾರಿದರು.
ಕಲ್ಯಾಣ ಕರ್ನಾಟಕ ಭಾಗದ ಮಕ್ಕಳು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸ್ ಆದರೂ ಅವರಿಗೆ ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ. ಯಾರು ತಪ್ಪು ಮಾಡಿದ್ದಾರೆ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದರು.ಪಿಎಸೈ ಪರೀಕ್ಷೆ ಅಕ್ರಮದಲ್ಲಿ ಯಾರು ಕಿಂಗ್ ಫಿನ್ ಇದ್ರೂ, ಈಗ ನಡೆದ ಕೆಇಎ ಪರೀಕ್ಷೆ ಅಕ್ರಮದಲ್ಲೂ ಅವರೇ ಕಿಂಗ್ ಫಿನ್ ಇದ್ದಾರೆ. ನಿಮ್ಮ ಕೈಯಲ್ಲೇ ಹುಣ್ಣು ಇಟ್ಕೊಂಡು ಬೇರೆಯವರಿಗೆ ಏನ್ ತೋರಿಸುತ್ತೀರಿ, ಇನ್ನೊಂದು ಬಾರಿ ಅಕ್ರಮ ಆಗದ ರೀತಿಯಲ್ಲಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದರು.
ಕಾಟಾಚಾರಕ್ಕೆ ಪತ್ರಿಕೆಗಳಲ್ಲಿ ಹೇಳಿಕೆಗಳನ್ನು ಕೊಡೋದು ಆಗಬಾರದು. ಕಷ್ಟಪಟ್ಟು ಓದಿ ಪಿಎಸೈ ಪರೀಕ್ಷೆ ಬರೆದು ಪಾಸ್ ಆಗಿ ಸಮವಸ್ತ್ರ ಹೊಲಿಸಿದವರಿಗೆ ನಿರಾಸೆ ಆಗಿದೆ. ಪಿಎಸೈ ಆಗಿದ್ದೇನೆ ಅಂತ ನಿಶ್ಚಿತಾರ್ಥ ಆಗಿತ್ತು. ಈಗ ರದ್ದಾದ ಮೇಲೆ ಸಂಬಂಧ ಮುರಿದು ಬಿದ್ದಿದೆ. ಅಂತ ನನಗೆ ಫೋನ್ ಮಾಡಿ ಹೇಳಿದ್ದಾರೆ ಎಂದು ಪಿಎಸೈ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರ ನೋವನ್ನು ರಾಜೂಗೌಡ ಈ ಸಂದರ್ಭದಲ್ಲಿ ತೋಡಿಕೊಂಡರು.