ಸಾರಾಂಶ
ಸೋಮನಾಳದ ಪರಶುರಾಮ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ
ಕನ್ನಡಪ್ರಭ ವಾರ್ತೆ ಕಾರಟಗಿಯಾದಗಿರಿ ಪಿಎಸ್‌ಐ ಪರುಶರಾಮ್ ಅನುಮಾನಾಸ್ಪದ ಸಾವಿನಲ್ಲಿ ಆಡಳಿತ ಪಕ್ಷದ ಶಾಸಕರಾಗಿರುವ ಚೆನ್ನಾರೆಡ್ಡಿ ಅವರ ಕೈವಾಡ ಇದ್ದು, ಸಿಐಡಿ ತನಿಖೆಯಿಂದ ನ್ಯಾಯ ಸಿಗುವುದು ಅಸಾಧ್ಯ. ಈ ಪ್ರಕರಣವನ್ನು ಸಿಬಿಐ ಒಪ್ಪಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ತಾಲೂಕಿನ ಸೋಮನಾಳ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ, ಮೃತ ಪಿಎಸ್‌ಐ ಪರಶುರಾಮ್ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ಆಡಳಿತ ಪಕ್ಷದ ಶಾಸಕರದ್ದೆ ಕೈವಾಡ ಇರುವುದರಿಂದ ಹಿಂದುಮುಂದು ನೋಡುತ್ತಿದ್ದಾರೆ. ಸಂವಿಧಾನ, ಅಂಬೇಡ್ಕರ್ ಬಗ್ಗೆ ಸಿಎಂ ಭಾಷಣ ಮಾಡುತ್ತಾರೆ. ಆದರೆ, ಇಲ್ಲಿ ಒಬ್ಬ ದಲಿತ ಸಮುದಾಯದ ಪಿಎಸ್‌ಐ ಕುಟುಂಬಕ್ಕೆ ಅನ್ಯಾಯವಾಗಿದೆ. ಇದು ಸಿಬಿಐಗೆ ಕೊಡುವ ಪ್ರಕರಣವಲ್ಲವೇ ಎಂದು ಪ್ರಶ್ನೆ ಮಾಡಿದರು.
ಅನುಮಾನಾಸ್ಪದ ಸಾವು ನಡೆದು ೧೧ ದಿನಗಳು ಗತಿಸಿವೆ. ಆದರೆ ಯಾರನ್ನೂ ಬಂಧಿಸಿಲ್ಲ. ಪಿಎಸ್‌ಐ ಸಾವಿಗೆ ಆಡಳಿತ ಪಕ್ಷದ ಶಾಸಕರೇ ಕಾರಣ, ಅವರು ವರ್ಗಾವಣೆಯಲ್ಲಿ ಹಣ ಕೇಳಿದ್ದೇ ಕಾರಣ ಎಂದು ನೊಂದ ಕುಟುಂಬಸ್ಥರು ನೇರವಾಗಿ ಆರೋಪಿಸಿದ್ದಾರೆ. ಇಷ್ಟೆಲ್ಲ ಆರೋಪಗಳಿದ್ದರೂ ಕೂಡಾ ಶಾಸಕರು ಮತ್ತು ಆತನ ಮಗನ ಬಂಧನವಾಗಿಲ್ಲ ಎಂದರೆ ನಾಚಿಕೆಗೇಡಿನ ಸಂಗತಿ ಎಂದರು.ಕೂಡಲೇ ಗೃಹ ಸಚಿವರು ಪ್ರತಿಷ್ಠೆಯನ್ನು ಬದಿಗೆ ಸರಿಸಿ ಪ್ರಕರಣ ಸಿಬಿಐ ಒಪ್ಪಿಸಿದರೆ ಮಾತ್ರ ಆರೋಪಿ ಸ್ಥಾನದಲ್ಲಿರುವ ಶಾಸಕನ ವಿರುದ್ಧ ತನಿಖೆ ಸಾಧ್ಯ. ಇಲ್ಲದಿದ್ದರೆ ನಿಮ್ಮ ಪಕ್ಷದ ಶಾಸಕನ ವಿರುದ್ಧವೇ ನೀವು ಪ್ರಾಮಾಣಿಕ ರೀತಿಯಲ್ಲಿ ತನಿಖೆ ಮಾಡಿ ನೋವಿನಲ್ಲಿರುವ ಕುಟುಂಬಕ್ಕೆ ನೀವು ನ್ಯಾಯ ನೀಡುತ್ತೀರಿ ಎಂದು ನಾವು ಭಾವಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ದಢೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮುಖಂಡರಾದ ಬಸವರಾಜ್ ಕ್ಯಾವಟರ್, ಶರಣು ತಳ್ಳಿಕೇರಿ, ಅಮರೇಶ ಕುಳಗಿ, ಪುರಸಭೆ ಸದಸ್ಯರಾದ ಬಸವರಾಜ ಕೊಪ್ಪದ, ನಾಗರಾಜ್ ಬಿಲ್ಗಾರ್, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಬಸವರಾಜ ಎತ್ತಿನಮನಿ, ಶಿವಶರಣೇಗೌಡ ಯರಡೋಣಾ, ಪ್ರಭು ಬೂದಿ, ಉಮೇಶ್ ಭಂಗಿ ಸೇರಿದಂತೆ ಇತರರಿದ್ದರು.