ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯಲ್ಲಿ ನಡೆದಿದ್ದ ಜಗಳದ ಕುರಿತು ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳಾ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ‌ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದು ಕೋರಿ ಮಹಿಳಾ ಸಬ್​ಇನ್​ಸ್ಪೆಕ್ಟರ್ ಟಿ.ಬಿ. ಪದ್ಮಾವತಿ ಅವರು (ಪಿಎಸ್‌ಐ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅವರಿಗೆ ಲಕ್ಷ ರು.ದಂಡ ವಿಧಿಸಿ ಅರ್ಜಿ ವಜಾಗೊಳಿಸಿ‌ದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಮೈಕೋ ಲೇಔಟ್ ಪೊಲಿಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಕೋರಿ ಟಿ.ಬಿ.‌ಪದ್ಮಾವತಿ ಅವರು ಹೈಕೋರ್ಟ್ ನಲ್ಲಿ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಪ್ರಕರಣ ಸಂಬಂಧ ಅರ್ಜಿದಾರೆಯ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ‌ ನಡೆಸಲು ಇದೇ ಪೀಠ ಆದೇಶಿಸಿತ್ತು. ಈ ಹಿಂದಿನ ಆದೇಶವನ್ನು ಮರೆ ಮಾಚಿ ರಜಾ ಕಾಲದ ಪೀಠದಿಂದ ಎಫ್ಐಆರ್ ಹಾಗೂ ತನಿಖೆಗೆ ಅರ್ಜಿದಾರೆ ತಡೆಯಾಜ್ಞೆ ಪಡೆದುಕೊಂಡಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ನಂತರ ಅರ್ಜಿದಾರರಿಗೆ ಒಂದು ಲಕ್ಷ ರು. ದಂಡ ವಿಧಿಸಿ ಅರ್ಜಿ ವಜಾಗೊಳಿಸಿದ ಪೀಠ, ದಂಡದ ಮೊತ್ತವನ್ನು ಮುಂದಿನ 8 ವಾರಗಳಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ನಿರ್ದೇಶಿಸಿತು.


ಇದಕ್ಕೂ ಮುನ್ನ ಅರ್ಜಿದಾರರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಎಫ್‌ಐಆರ್ ದಾಖಲಿಸಲು ಈ ನ್ಯಾಯಪೀಠ ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸದೆ ರಜಾಕಾಲದ‌ ಪೀಠದಿಂದ ಎಫ್ಐಆರ್ ತಡೆಯಾಜ್ಞೆ ಪಡೆಯಲಾಗಿದೆ.‌ ಇದು ಸತ್ಯಾಂಶ ಮರೆಮಾಚುವುದಲ್ಲವೇ? ಅಷ್ಟಕ್ಕೂ ಅರ್ಜಿದಾರೆ ತಮ್ಮನ್ನು ತಾವು ಏನಂದುಕೊಂಡಿದ್ದಾರೆ? ಇದಕ್ಕಾಗಿಯೇ ನಾನು ದಂಡ ವಿಧಿಸುತ್ತಿರುವುದು ಎಂದು ಕಿಡಿಕಾರಿತು.

ಹಾಗೆಯೇ, ಆರೋಪಿತ ಮಹಿಳಾ ಪಿಎಸ್​ಐ ವಿರುದ್ಧ ಇಲಾಖಾ ತನಿಖೆ ಪ್ರಾರಂಭಿಸಲಾಗಿದಿಯೇ? ಎಂದು ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ತನಿಖೆಯನ್ನು ಈ ಕೂಡಲೇ ಮುಂದುವರಿಸಬೇಕು.‌ ತನಿಖೆಯ ಅಂತಿಮ ವರದಿ ಸಲ್ಲಿಸುವ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ಈ ನ್ಯಾಯಪೀಠದ ಮುಂದಿಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಪ್ರಕರಣವೇನು?

ರಸ್ತೆ ಜಗಳದ ಸಂತ್ರಸ್ತೆಯಾಗಿದ್ದ ವಕೀಲೆಯೊಬ್ಬರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ತಾಸುಗಟ್ಟಲೆ ಕಾಯಿಸಲಾಗಿತ್ತು. ಇದರಿಂದ ಆಕ್ರೋಶಗೊಂಡು ವಕೀಲೆಯು ಠಾಣೆಯ ಮೇಜಿನ ಮೇಲಿದ್ದ ಕಡತಗಳನ್ನು ಕೆಳಗೆ ತಳ್ಳಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಿಳಾ ಪಿಎಸ್‌ಐ‌ ಪದ್ಮಾವತಿ (ಅರ್ಜಿದಾರೆ), ವಕೀಲೆಯ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಗಲಾಟೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್ ರದ್ದು ಕೋರಿ ವಕೀಲೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರ ವಕೀಲೆಯ ವಿರುದ್ಧದ ಎಫ್​ಐಆರ್​ ರದ್ದುಪಡಿಸಲು ನಿರಾಕರಿಸಿತ್ತು. ಅಲ್ಲದೆ, ಬೂಟ್​ ಕಾಲಿನಿಂದ ವಕೀಲೆಯನ್ನು ಒದ್ದಿದ್ದ ಮಹಿಳಾ ಪಿಎಸ್​ಐ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಬೇಕು ಹಾಗೂ ಇಲಾಖಾ ವಿಚಾರಣೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು.

ಅದರಂತೆ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಮೇ‌ 5ರಂದು ಅರ್ಜಿದಾರರ‌ ವಿರುದ್ಧ ಹಲ್ಲೆ ಮತ್ತಿತರ ಅಪರಾಧ ಮೇಲೆ‌ ಎಫ್ಐಆರ್ ದಾಖಲಾಗಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಹೈಕೋರ್ಟ್ ನಿರ್ದೇಶನ ಮೇಲೆ ಎಫ್ಐಆರ್ ದಾಖಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿರಲಿಲ್ಲ. ಮೇ ತಿಂಗಳಲ್ಲಿ ಹೈಕೋರ್ಟ್​ನ ರಜಾಕಾಲದ ನ್ಯಾಯಪೀಠದಿಂದ ಅರ್ಜಿದಾರರು ತಮ್ಮ ವಿರುದ್ಧದ ತನಿಖೆಗೆ ತಡೆಯಾಜ್ಞೆ ಪಡೆದುಕೊಂಡಿದ್ದರು.

ಅರ್ಜಿ ಮತ್ತೆ ಮಂಗಳವಾರ ವಿಚಾರಣೆಗೆ ಬಂದಾಗ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಪೀಠ, ಪ್ರಕರಣ ಸಂಬಂಧ ಆರೋಪಿತ ಪಿಎಸ್​ಐ, ವಕೀಲೆಯೊಬ್ಬರನ್ನು ಬೂಟ್​ ಕಾಲಿನಿಂದ ಒದ್ದಿರುವ ಅಂಶ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಗೊತ್ತಾಗುತ್ತಿದೆ. ಕೇವಲ ಮೇಜಿನ ಮೇಲಿದ್ದ ಕಡತಗಳನ್ನು ತಳ್ಳಿದ ಕಾರಣಕ್ಕೆ ಈ ರೀತಿಯಲ್ಲಿ ವರ್ತಿಸಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶ ನೀಡಲಾಗಿದಿಯೇ? ರಜಾಕಾಲದ ಪೀಠಕ್ಕೆ ಹೋಗಿ ತಡೆಯಾಜ್ಞೆ ತರಲು ತುರ್ತು ಏನಿತ್ತು? ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.