2025-2026ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ವಾಣಿಜ್ಯ, ಕಲಾ ಹಾಗೂ ವಿಜ್ಞಾನ ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

2025-2026ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ವಾಣಿಜ್ಯ, ಕಲಾ ಹಾಗೂ ವಿಜ್ಞಾನ ಮೂರೂ ವಿಭಾಗಗಳಲ್ಲಿ ವಿದ್ಯಾರ್ಥಿನಿಯರೇ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಿವರ ಇಲ್ಲಿದೆ.

*ವಾಣಿಜ್ಯ ವಿಭಾಗದಲ್ಲಿ ಅದಿತಿ ಬಾಪು, ದಿಶಾಗೆ 600ಕ್ಕೆ 600

ಬೆಂಗಳೂರಿನ ವಿವಿ ಪುರಂನ ಎಸ್‌ಬಿ ಮಹಾವೀರ ಜೈನ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಅದಿತಿ ಎ. ಬಾಪು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ಒಟ್ಟಾರೆ ಹಾಗೂ ವಿಭಾಗದಲ್ಲಿ ಟಾಪರ್‌ ಆಗಿದ್ದಾರೆ.

ಇದೇ ವಿಭಾಗದಲ್ಲಿ ಬೆಳಗಾವಿಯ ಸರ್ಕಾರಿ ಪಿಯು ಕಾಲೇಜಿನ ಧ್ವನಿ ಸಂತೋಷ್‌ ಕುಲಕರ್ಣಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕೊಡಿಯಾಲ್‌ ಬೈಲಿನ ಎಸ್‌ಟಿ ಅಲಾಯ್ಸಿಸ್‌ ಪಿಯು ಕಾಲೇಜಿನ ರಚೆಲ್‌ ಡಿಸೋಜಾ ತಲಾ 599 ಅಂಕ ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ವಿವಿಧ ಕಾಲೇಜಿನ ಆರು ವಿದ್ಯಾರ್ಥಿಗಳು 598 ಅಂಕ ಪಡೆದು ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

*ಕಲಾ ವಿಭಾಗದಲ್ಲಿ ಅರ್ಚನ, ಸಂಗೀತ, ಶೃತಿ ಟಾಪರ್ಸ್‌

ಕಲಾ ವಿಭಾಗದಲ್ಲಿ ಪ್ರತೀ ವರ್ಷದಂತೆ ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ಅರ್ಚನಾ ಡಿ.ಎಂ., ಸಂಗೀತಾ ಮತ್ತು ಕಲಬುರಗಿಯ ಎಸ್‌ಎಂಟಿ ವಿಜಿ ಮಹಿಳಾ ಪಿಯು ಕಾಲೇಜಿನ ಶೃತಿ ತಲಾ 600ಕ್ಕೆ 598 ಅಂಕಗಳನ್ನು ಪಡೆದು ಟಾಪರ್‌ಗಳಾಗಿದ್ದಾರೆ. ಉಳಿದಂತೆ ವಿವಿಧ ಕಾಲೇಜಿನ ಐವರು ವಿದ್ಯಾರ್ಥಿಗಳು 595 ಅಂಕ ಪಡೆದ ದ್ದ್ವಿತೀಯ ಸ್ಥಾನ, ಎಂಟು ವಿದ್ಯಾರ್ಥಿಗಳು 594 ಅಂಕ ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ.

* ವಿಜ್ಞಾನದಲ್ಲಿ ಪ್ರಿನ್ಸಿಲ್ಲಾ ಕಾರ್ಡೋಜ ಪ್ರಥಮ

ವಿಜ್ಞಾನ ವಿಭಾದಲ್ಲಿ ಮಂಗಳೂರಿನ ದಿ ಲರ್ನಿಂಗ್‌ ಸೆಂಟರ್‌ ಪಿಯು ಕಾಲೇಜಿನ ಪ್ರಿನ್ಸಿಲ್ಲಾ ಕಾರ್ಡೋಜ ಎಂಬ ವಿದ್ಯಾರ್ಥಿನಿ 600ಕ್ಕೆ 599 ಅಂಕ ಪಡೆದು ಟಾಪರ್‌ ಆಗಿದ್ದಾರೆ. ಇದೇ ಕಾಲೇಜಿನ ಮೀನಾಕ್ಷಿ ಉನ್ನಿತಾನ್‌, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನ ಅಭಿರಾಮ್‌ ವಿ. ಭಟ್‌, ಮೂಡಿಬಿದರೆಯ ಕಳ್ಳಬೆಟ್ಟುವಿನ ನ್ಯೂ ವೈಬ್ರೆಂಟ್‌ ಪಿಯು ಕಾಲೇಜಿನ ಧನುಷ್‌ ಗುತ್ತಿ, ಶಾರದಾ ಸ್ವತಂತ್ರ ಪಿಯು ಕಾಲೇಜಿನ ವೈಭವಿ ಕರ್ಕೇರಾ, ಎಕ್ಸ್‌ಪರ್ಟ್‌ ಪಿಯು ಕಾಲೇಜಿನ ನಂದನ್‌ ನಾಯಕ್‌, ಸಮನ್ಯು ಶೆಟ್ಟಿ, ಆಳ್ವಾಸ್‌ ಪಿಯು ಕಾಲೇಜಿನ ರಕ್ಷಿತಾ, ಬೆಂಗಳೂರಿನ ಅರಕೆರೆಯ ಬೇಸ್‌ ಪಿಯು ಕಾಲೇಜಿನ ಏಂಜೆಲ್ ತಿವಾರಿ, ಆಕ್ಸಫರ್ಡ್‌ ಸ್ವತಂತ್ರ ಕಾಲೇಜಿನ ಆಯಿ ರಾಘವ್‌ ವಿಶ್ವೇಶ್‌, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜಿನ ಅಂಕಿತ್‌ ಭೀಮಪ್ಪ ಕಾರಟಗಿ, ಉಡುಪಿ ಜಿಲ್ಲೆ ಜನತಾ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ರಶ್ಮಿ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಶ್ರೀ ವಿದ್ಯಾನಿಕೇತನ ಪಿಯು ಕಾಲೇಜಿನ ಯು.ಶ್ರಾವಣಿ 598 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.ಏ.30ರಿಂದ ಮೇ 13ವರೆಗೆ ದ್ವಿತೀಯ ಪಿಯು ಎಕ್ಸಾಂ-2:ದ್ವಿತೀಯ ಪಿಯುಸಿ ಪರೀಕ್ಷೆ-2ಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದ್ದು ಏ.30ರಿಂದ ಮೇ 13ರವರೆಗೆ ನಡೆಯಲಿವೆ. ಬಹುತೇಕ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ, ಸಂಗೀತ ಮತ್ತು ಎನ್‌ಎಸ್‌ಕ್ಯೂಎಫ್‌ ವಿಷಯಗಳು ಮಧ್ಯಾಹ್ನ 2ರಿಂದ 4.15ರವರೆಗೆ ನಡೆಯಲಿವೆ.

ಪರೀಕ್ಷೆ2ಕ್ಕೆ ಅರ್ಜಿ ಸಲ್ಲಿಸಲು ಏ.17 ಕೊನೆಯ ದಿನ. ಅಭ್ಯರ್ಥಿಗಳು ಪರೀಕ್ಷಾ ಮಂಡಳಿಯ ವೆಬ್ ಸೈಟ್ kseab.karnataka.gov.in ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಪರೀಕ್ಷೆ -1ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪರೀಕ್ಷೆ ಶುಲ್ಕ ಇರುವುದಿಲ್ಲ. ಆದರೆ ಪರೀಕ್ಷೆ -1ರ ಫಲಿತಾಂಶ ಸುಧಾರಿಸಲು ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ಒಂದು ವಿಷಯ (ಪ್ರಥಮ ಬಾರಿಗೆ)ಕ್ಕೆ 175, ಒಂದು ವಿಷಯಕ್ಕೆ (ಎರಡನೇ ಬಾರಿಗೆ) 350 ರೂ ನಿಗದಿ ಪಡಿಸಲಾಗಿದೆ.

ವೇಳಾಪಟ್ಟಿಏ. 30-ಕನ್ನಡ, ಅರೇಬಿಕ್,ಮೇ 2- ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ರಸಾಯನಶಾಸ್ತ್ರ

ಮೇ 4- ಇಂಗ್ಲಿಷ್

ಮೇ 5- ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣಶಾಸ್ತ್ರ

ಮೇ 6- ಅರ್ಥಶಾಸ್ತ್ರ, ಜೀವಶಾಸ್ತ್ರ, ಇತಿಹಾಸ, ಭೌತಶಾಸ್ತ್ರ

ಮೇ 7- ಇತಿಹಾಸ, ಗಣಿತ, ಗೃಹವಿಜ್ಞಾನ

ಮೇ 8- ರಾಜ್ಯಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

ಮೇ 9- ಹಿಂದಿ

ಮೇ 11- ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ

ಮೇ 12- ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭಶಾಸ್ತ್ರ, ಮೂಲ ಗಣಿತ

ಮೇ 13- (ಬೆಳಗ್ಗೆ) ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್- (ಮಧ್ಯಾಹ್ನ) ಹಿಂದೂಸ್ಥಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ಕೋರ್ಸ್‌ಗಳುಪಿಯು ಪರೀಕ್ಷೆ: ಮರು ಮೌಲ್ಯಮಾಪನ, ಛಾಯಾಪ್ರತಿಗೆ ಅರ್ಜಿ ಸಲ್ಲಿಸಲು ಅವಕಾಶ:

ದ್ವಿತೀಯ ಪಿಯು ಪರೀಕ್ಷೆ-1ರಲ್ಲಿನ ತಮ್ಮ ಫಲಿತಾಂಶದಲ್ಲಿ ಯಾವುದೇ ಅನುಮಾನ, ಗೊಂದಲ ಇದ್ದರೆ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಛಾಯ ಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್ ಸೈಟ್ https://kseab.karnataka.gov.in ನಲ್ಲಿ ಅವಕಾಶ ನೀಡಲಾಗಿದೆ. ಜೊತೆಗೆ ಕರ್ನಾಟಕ ಓನ್ ಮೊಬೈಲ್ ಆ್ಯಪ್ ನಲ್ಲಿ ಸಲ್ಲಿಸಬಹುದು.

ಉತ್ತರ ಪತ್ರಿಕೆಯ ಛಾಯಪ್ರತಿಗೆ ಅರ್ಜಿ ಸಲ್ಲಿಸಲು ಏ. 15ರವರೆಗೆ, ಉತ್ತರ ಪತ್ರಿಕೆಯ ಛಾಯ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಲು ಏ.12ರಿಂದ ಏ.17ರವರೆಗೆ, ಮರು ಮೌಲ್ಯಮಾಪನ ಹಾಗೂ ಅಂಕ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಏ.13ರಿಂದ ಏ.19ರವರೆಗೆ ಸಮಯ ನೀಡಲಾಗಿದೆ. ಛಾಯ ಪ್ರತಿ ಪಡೆಯಲು ಶುಲ್ಕ ಪ್ರತಿ ವಿಷಯಕ್ಕೆ 530 ರು. ಮರು ಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ 1,670 ರು. ನಿಗದಿ ಪಡಿಸಲಾಗಿದೆ.