ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಮಾರ್ಚ್ 2024ರಲ್ಲಿ ಜರುಗಿದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ವಿಜಯಪುರ ಜಿಲ್ಲೆ ಒಟ್ಟು ಶೇ.94.89 ಫಲಿತಾಂಶದೊಂದಿಗೆ ರಾಜ್ಯದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಕಟಗೊಂಡ ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಕುರಿತು ಮಾತನಾಡಿದ ಅವರು, ಕಲಾ ವಿಭಾಗದಲ್ಲಿ 16,215 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 14,174 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 4,088 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 3,725 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಷಯದಲ್ಲಿ 11,533 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 10,944 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು 5ನೇ ಸ್ಥಾನವನ್ನು ಹೊಂದಿತ್ತು. ಆದರೆ, ಈ ವರ್ಷದ ಫಲಿತಾಂಶದಲ್ಲಿ ಸುಧಾರಣೆ ಕಂಡು ರಾಜ್ಯಕ್ಕೆ 3ನೇ ಸ್ಥಾನ ಪಡೆದಿದೆ. ಮುಂದಿನ ವರ್ಷದಲ್ಲಿ ಮೊದಲನೇ ಸ್ಥಾನ ಪಡೆಯಲು ಜಿಲ್ಲಾಡಳಿತದಿಂದ ತಯಾರಿ ನಡೆಸಲಾಗುವುದು. ಜಿಲ್ಲೆಯ ಫಲಿತಾಂಶ ಸುಧಾರಣೆಯಲ್ಲಿ ಶ್ರಮವಹಿಸಿದ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಜಯಪುರದ ಎಸ್.ಎಸ್.ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ವೇದಾಂತ ನಾವಿ ಶೇ.99.33 ಅಂಕಗಳನ್ನು ಪಡೆದು ರಾಜ್ಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದರು.ಇದೇ ವೇಳೆ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ವೇದಾಂತ ನಾವಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಪಿಯು ಡಿಡಿ ಸಿ.ಕೆ.ಹೊಸಮನಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸ್.ಎಸ್.ಪಿಯು ಕಾಲೇಜಿನ ಪ್ರಾಚಾರ್ಯರು, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸ್.ಎಸ್.ಪಿಯು ಕಾಲೇಜಿನ ಪ್ರಾಚಾರ್ಯರು, ಶಿಕ್ಷಕರು ಉಪಸ್ಥಿತರಿದ್ದರು.ಇವರೇ ನೋಡಿ ಜಿಲ್ಲೆಯ ಟಾಪರ್ಸ್:
ಪಿಯುಸಿ ಫಲಿತಾಂಶ ಬಂದಿದ್ದು ವಿಜಯಪುರ ಜಿಲ್ಲೆಯಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಬಂದ ಟಾಪರ್ಸ್ ಇವರು..ಕಲಾ ವಿಭಾಗ:ನಗರದ ಎಸ್.ಎಸ್. ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ನಾವಿ 596 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಅಲ್ಲದೇ ಇಡೀ ರಾಜ್ಯದಲ್ಲೇ ಕಲಾ ವಿಭಾಗದಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದಾನೆ. ಸಿಂದಗಿ ತಾಲೂಕಿನ ದೇವರನಾವದಗಿಯ ಕೆಜಿ ಗುಗ್ಗರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಗಮ್ಮ ಸಿನ್ನೂರ 593 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಿಂದಗಿ ತಾಲೂಕಿನ ಮಲಘಾಣದ ಶರಣಬಸವೇಶ್ವರ ಪಿಯು ಕಾಲೇಜಿನ ವಿದ್ಯಾರ್ಥಿನಿ ಸೌಂದರ್ಯ ಹಚಡದ 593 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.
ವಾಣಿಜ್ಯ ವಿಭಾಗ:ನಗರದ ಸಂತ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ವಂಟಮುರಿ 591 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ನಗರದ ಬಿ.ಎಂ.ಪಾಟೀಲ್ ಪಿಯು ಕಾಲೇಜಿನ ವಿದ್ಯಾರ್ಥಿ ತುಷಾರ ಜೈನ್ 591 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಸಿಂದಗಿ ತಾಲೂಕಿನ ಮೋರಟಗಿಯ ಕಲ್ಪವೃಕ್ಷ ಪಿಯು ಕಾಲೇಜಿನ ವಿದ್ಯಾರ್ಥಿ ಸೋಯಲ್ ಮುಲ್ಲಾ 590 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.
ವಿಜ್ಞಾನ ವಿಭಾಗ:ನಗರದ ಬೆನಕಟ್ಟಿ ಪಿಯು ಕಾಲೇಜಿನ ವಿದ್ಯಾರ್ಥಿ ಆಕಾಶ ಕುಲಕರ್ಣಿ 594 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ನಗರದ ರೇಡಿಯಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹದಿಯಾ ಹುಣಚಗಿ 593 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾಳೆ. ನಗರದ ಎಕ್ಸಲೆಂಟ್ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಮೀತಾ ಅವಟಿ 592 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.
ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟು ಶೇ.94.89 ಫಲಿತಾಂಶ ಪಡೆಯುವ ಮೂಲಕ ವಿಜಯಪುರ ಜಿಲ್ಲೆ ರಾಜ್ಯದಲ್ಲೇ ಟಾಪ್ ಮೂರನೇ ಸ್ಥಾನಕ್ಕೆ ಏರಿದೆ. ಇಡೀ ಜಿಲ್ಲೆಯೇ ಹೆಮ್ಮೆ ಪಡುವ ಶೈಕ್ಷಣಿಕ ಸಾಧನೆಯಾಗಿದೆ. ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವೇದಾಂತ ನಾವಿ ಸೇರಿ ಜಿಲ್ಲೆಗೆ ಕೀರ್ತಿ ತಂದ ಎಲ್ಲ ಹೆಮ್ಮೆಯ ಸಾಧಕ ವಿದ್ಯಾರ್ಥಿಗಳಿಗೆ, ಶ್ರಮಿಸಿದ ಎಲ್ಲಾ ಶಿಕ್ಷಕ ಬಳಗ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ.-ರಮೇಶ ಜಿಗಜಿಣಗಿ, ವಿಜಯಪುರ ಸಂಸದ.
----------ಈ ಸಲದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಒಟ್ಟಾರೆ ಶೇ.94.89 ಫಲಿತಾಂಶ ಸಾಧಿಸುವ ಮೂಲಕ ರಾಜ್ಯದಲ್ಲೇ ವಿಜಯಪುರ ಜಿಲ್ಲೆ ಸ್ಥಾನ ಪಡೆದು ಪಟ್ಟಿಯಲ್ಲಿ 3ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಎಲ್ಲರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ಇನ್ನಷ್ಟು ಉನ್ನತ ಸ್ಥಾನಕ್ಕೇರಲಿದೆ.
-ಹನುಮಂತ ನಿರಾಣಿ, ವಾಯವ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ.
----------ಈ ಬಾರಿ ನಮ್ಮ ಜಿಲ್ಲೆಯ ಹೆಮ್ಮೆಯ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅದ್ವಿತೀಯ ಸಾಧನೆ ತೋರುವ ಮೂಲಕ ವಿಜಯಪುರ ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ಅತ್ಯುತ್ತಮ ಫಲಿತಾಂಶ ಗಳಿಸಿ ಶೈಕ್ಷಣಿಕ ಸಾಧನೆಗೈದ ಎಲ್ಲಾ ಮುದ್ದಿನ ವಿದ್ಯಾರ್ಥಿಗಳಿಗೆ, ಸಮಸ್ತ ಗುರುವೃಂದಕ್ಕೆ ಹಾಗೂ ಎಲ್ಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಅಭಿನಂದನೆ.-ಅರುಣ್ ಶಹಾಪುರ, ಮಾಜಿ ಎಂಎಲ್ಸಿ.