ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
2023 - 24ನೇ ಸಾಲಿನ ಪದವಿಪೂರ್ವ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಜಿಲ್ಲೆ ಶೇ. 96.80 ಸಾಧನೆಯೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಕಳೆದ ಮೂರು ವರ್ಷಗಳಿಂದ ಸತತವಾಗಿ ದ್ವಿತೀಯ ಸ್ಥಾನ ಗಳಿಸುತ್ತಿದೆ.2019ರಲ್ಲಿ ಶೇ 92.20 ಮತ್ತು 2020ರಲ್ಲಿ ಶೇ 90.71 ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ, 2021ರಲ್ಲಿ ಕೊವೀಡ್ ನಿಂದಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿ ಶೇ 100 ಫಲಿತಾಂಶ ಗಳಿಸಿತ್ತು.
2022ರಲ್ಲಿ ಶೇ 86.38ಕ್ಕೆ ಕುಸಿದ ಜಿಲ್ಲೆಯ ಫಲಿತಾಂಶ ದ್ವಿತೀಯ ಸ್ಥಾನಕ್ಕೆ ದೂಡಿತು. ಪಕ್ಕದ ದ.ಕ. ಜಿಲ್ಲೆಯ ಪ್ರಥಮ ಸ್ಥಾನ ಗಳಿಸಿತ್ತು. 2023ರಲ್ಲಿ ಶೇ 95.24 ಸಾಧನೆ ಮಾಡಿದರೂ ದ.ಕ. ಜಿಲ್ಲೆ ಪ್ರಥಮ ಉಡುಪಿ ದ್ವಿತೀಯ ಸ್ಥಾನಗಳಿಸಿದ್ದವು. ಈ ಬಾರಿ ಮತ್ತದೇ ಪುನಾರವರ್ತನೆಯಾಗಿದೆ.ಹುಡುಗಿಯರದ್ದೇ ಮೇಲುಗೈ:
ಜಿಲ್ಲೆಯಲ್ಲಿ ಒಟ್ಟು 15,328 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14837 (ಶೇ 96.80) ಮಂದಿ ಪಾಸಾಗಿದ್ದಾರೆ. ಪರೀಕ್ಷೆ ಬರೆದಿದ್ದ 7719 ಹುಡುಗರಲ್ಲಿ 7223 (ಶೇ 93.57) ಮತ್ತು 8245 ಹುಡುಗಿಯರಲ್ಲಿ 7966 (ಶೇ 96.62) ಮಂದಿ ಪಾಸಾಗಿದ್ದಾರೆ.ಕಲಾವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 1032 ವಿದ್ಯಾರ್ಥಿಗಳಲ್ಲಿ 938 (ಶೇ 90.45), ವಾಣಿಜ್ಯ ವಿಭಾಗದಲ್ಲಿ 6566 ವಿದ್ಯಾರ್ಥಿಗಳಲ್ಲಿ 6301 (ಶೇ 95.96) ಮತ್ತು ವಿಜ್ಞಾನ ವಿಭಾಗದಲ್ಲಿ 7725 ವಿದ್ಯಾರ್ಥಿಗಳಲ್ಲಿ 7598 (ಶೇ 98.36) ಮಂದಿ ಪಾಸಾಗಿದ್ದಾರೆ.
ಗ್ರಾಮೀಣ ಮಕ್ಕಳ ಸಾಧನೆ:ಜಿಲ್ಲೆಯ ಗ್ರಾಮೀಣ ಭಾಗದಿಂದ ಒಟ್ಟು 7349 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 7154 (ಶೇ 97.35) ಮಂದಿ ಪಾಸಾಗಿದ್ದರೆ, ನಗರ ಪ್ರದೇಶದಿಂದ ಪರೀಕ್ಷೆ ಬರೆದಿದ್ದ 7979 ವಿದ್ಯಾರ್ಥಿಗಳಲ್ಲಿ 7683 (ಶೇ 96.29) ಮಂದಿ ಪಾಸಾಗಿದ್ದಾರೆ. ಜಿಲ್ಲೆಗೆ 2 ರ್‍ಯಾಂಕ್:
ಇಲ್ಲಿನ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಎಸ್.ಎಚ್. ವಾಣಿಜ್ಯ ವಿಭಾಗದಲ್ಲಿ ಶೇ 94 ಅಂಕಗಳೊಂದಿಗೆ ರಾಜ್ಯಕ್ಕೆ 2ನೇ ರ್‍ಯಾಂಕ್ ಗಳಿಸಿದ್ದಾರೆ.ವಿದ್ಯೋದಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೈಭವಿ ಆಚಾರ್ಯ ಅವರು ವಿಜ್ಞಾನ ವಿಭಾಗದಲ್ಲಿ ಶೇ 96 ಅಂಕಗಳೊಂದಿಗೆ 2ನೇ ರ್‍ಯಾಂಕ್‌ಗೆ ಭಾಜನರಾಗಿದ್ದಾರೆ.