ಸಾರಾಂಶ
ಸಾಹಿತ್ಯ ಚಟುವಟಿಕೆಯಲ್ಲಿ ಮಕ್ಕಳು ಏಕೆ ಭಾಗವಹಿಸಲು ಆಸಕ್ತಿ ಹೊಂದುತ್ತಿಲ್ಲ ಎನ್ನುವುದನ್ನು ಮನೋಶಾಸ್ತ್ರದ ಪ್ರಕಾರ ಅಧ್ಯಯನ ಮಾಡಬೇಕಿದೆ. ಮೊಬೈಲ್ ಅವರನ್ನು ಕಟ್ಟಿಹಾಕಿದ್ದು, ಇಡಿಯಾಗಿ ಗ್ರಂಥವನ್ನು ಓದುವ ವ್ಯವಧಾನ ಮಕ್ಕಳಿಗೆ ಇಲ್ಲದಾಗಿದೆ.
ಧಾರವಾಡ:
ಯಾವ ಅನುಭವವಿಲ್ಲದ ವಾಟ್ಸ್‌ಆ್ಯಪ್ ವಿಶ್ವವಿದ್ಯಾಲಯ ಯುವಕರ ದಿಕ್ಕು ತಪ್ಪಿಸುತ್ತಿದೆ ಎಂದು ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಮಹಿಳಾ ಸಾಹಿತ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಾಹಿತ್ಯ ಚಟುವಟಿಕೆಯಲ್ಲಿ ಮಕ್ಕಳು ಏಕೆ ಭಾಗವಹಿಸಲು ಆಸಕ್ತಿ ಹೊಂದುತ್ತಿಲ್ಲ ಎನ್ನುವುದನ್ನು ಮನೋಶಾಸ್ತ್ರದ ಪ್ರಕಾರ ಅಧ್ಯಯನ ಮಾಡಬೇಕಿದೆ. ಮೊಬೈಲ್ ಅವರನ್ನು ಕಟ್ಟಿಹಾಕಿದ್ದು, ಇಡಿಯಾಗಿ ಗ್ರಂಥವನ್ನು ಓದುವ ವ್ಯವಧಾನ ಮಕ್ಕಳಿಗೆ ಇಲ್ಲದಾಗಿದೆ. ಮಕ್ಕಳಿಗೆ ಕಥೆ ಹೇಳುವ ಸಂಸ್ಕೃತಿಯಿಂದ ದೂರ ಇಟ್ಟಿದ್ದೇವೆ. ಇಂದು ಮೊಬೈಲ್ ಇಲ್ಲದೇ ಮಕ್ಕಳು, ಯುವಕರು ಒಂದು ದಿನವೂ ಇರದಂಥ ಸ್ಥಿತಿಯಲ್ಲಿ ಸಾಹಿತಿಗಳು ಎಂಥ ಸಾಹಿತ್ಯದ ಮೂಲಕ ಮಕ್ಕಳನ್ನು ಓದಿನೆಡೆಗೆ ಆಕರ್ಷಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದರು.ಕನ್ನಡ ಸಾಹಿತ್ಯದ ಚರಿತ್ರೆ ನೋಡಿದಾಗ ಅದು ಕಟ್ಟುವ ಕೆಲಸ ಮಾಡುತ್ತ ಬಂದಿದೆ. ದಲಿತ, ಬಂಡಾಯ ನವೋದಯ, ನವ್ಯ ಎಲ್ಲ ಪ್ರಕಾರದ ಸಾಹಿತ್ಯಗಳು ಕಟ್ಟುವ ಕೆಲಸ ಮಾಡಿದವು. ಇಂದು ಚಳವಳಿಗಳು ಇಲ್ಲದ ಕಾಲಕ್ಕೂ ಯುವ ಬರಹಗಾರರು ಸಮಾಜಮುಖಿಯ ಚಿಂತನೆಯ ಸಾಹಿತ್ಯ ನೀಡುತ್ತಿದ್ದಾರೆ. ಸಾಹಿತ್ಯ ಸಮಾಜ ಬದಲಿಸುವ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಯಾವ ಮಾದರಿಯ ಮೂಲಕ ಮಾತನಾಡಿದರೆ ಸಮಾಜದಲ್ಲಿ ಸಂಚಲನ ಆಗುತ್ತದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಸ್ತ್ರೀವಾದ ಹೊಸ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವಂತಹದ್ದು. ಜಾತಿ ವ್ಯವಸ್ಥೆಯ ಸಂಕೀರ್ಣತೆಯಲ್ಲಿ ಮಹಿಳೆಯರೇ ಹೆಚ್ಚು ಶೋಷಿತರಾಗುತ್ತಿರುವುದು. ಈ ಕಾರಣಕ್ಕಾಗಿಯೇ ತಲ್ಲಣಗಳನ್ನು ಸಾಹಿತ್ಯದಲ್ಲಿ ಇಂದಿಗೂ ಮಹಿಳೆ ಹಿಡಿದಿಡುವುದಕ್ಕೆ ಆಗುತ್ತಿಲ್ಲ. ಇಂದು ಚಳವಳಿಗಳೇ ಇಲ್ಲದ ಈ ಕಾಲಘಟ್ಟದಲ್ಲಿ ನಮ್ಮ ಮಕ್ಕಳನ್ನು ಹೇಗೆ ಮುಖ್ಯವಾಹಿನಿಗೆ ತರಬೇಕು ಎಂಬುದರ ಬಗ್ಗೆ ತಡಕಾಡುತ್ತೇವೆ. ಇಂದಿನ ಮಕ್ಕಳು ಪ್ರಾಧ್ಯಾಪಕರೊಂದಿಗೆ ಏಕೆ ಸಂವಹನ ಮಾಡಲು ಆಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಮಹಿಳೆಯರು ಸಾಹಿತ್ಯ ರಚಿಸುವಾಗ ಅನುಭಾವ ಮುಖ್ಯವಾಗಬೇಕು, ಭಾಷೆಯ ಬಗ್ಗೆ ಆಳವಾದ ಜ್ಞಾನವಿರಬೇಕು. ಅಂದಾಗ ಉತ್ತಮ ಸಾಹಿತ್ಯ ಮಹಿಳೆಯರು ನೀಡಲು ಸಾಧ್ಯ ಎಂದರು.
ಸಂಗೀತಗಾರ್ತಿ ವಂದನಾ ಸತೀಶ ನೂಲ್ವಿ ಸುಗಮ ಸಂಗೀತ ಪ್ರಸ್ತುತಪಡಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.