ಬೀದಿ ಬದಿ ಕಸ ಸುರಿಯದಂತೆ ಜನಜಾಗೃತಿ

| Published : Oct 28 2024, 01:24 AM IST

ಸಾರಾಂಶ

ಕನಕಪುರ: ಬೀದಿ ಬದಿಗಳಲ್ಲಿ ಕಸ ಸುರಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು.

ಕನಕಪುರ: ಬೀದಿ ಬದಿಗಳಲ್ಲಿ ಕಸ ಸುರಿಯುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು.

ನಗರಸಭೆ ಮತ್ತು ಪೌರಾಡಳಿತ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಬೀದಿ ಬದಿ ಕಸ ಸುರಿಯದಂತೆ ಜನಜಾಗೃತಿ ಮೂಡಿಸುವ ಬೀದಿ ನಾಟಕಕ್ಕೆ ನಗರಸಭೆ ಪೌರಾಯುಕ್ತ ಮಹಾದೇವ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಪೌರಾಯುಕ್ತ ಮಹಾದೇವ್‌, ಬೀದಿ ಬದಿಗಳಲ್ಲಿ ಪ್ಲಾಸ್ಟಿಕ್ ಹಾಗೂ ಕಸ ಸುರಿಯುವುದರಿಂದ ಆಹಾರ ಹುಡುಕುವ ಬೀದಿ ನಾಯಿಗಳು ಸೇರಿದಂತೆ ಪ್ರಾಣಿ ಪಕ್ಷಿಗಳು ಹಸಿ ಕಸದ ಜೊತೆಗೆ ಪ್ಲಾಸ್ಟಿಕ್ ತಿಂದು, ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಪ್ರಾಣಾಪಾಯಗಳು ಸಂಭವಿಸುತ್ತವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದರಿಂದ ಅದು ಭೂಮಿಗೆ ಸೇರಿ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದರು.

ನಾಟಕದಲ್ಲಿ ಪ್ರತಿಯೊಬ್ಬರು ಮನೆಯಲ್ಲೇ ಹಸಿ ಮತ್ತು ಒಣ ಕಸವನ್ನ ಪ್ರತ್ಯೇಕವಾಗಿ ವಿಂಗಡಿಸಿ ಮನೆ ಬಳಿ ಬರುವ ನಗರಸಭೆ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು. ಮೆಡಿಕಲ್ ತ್ಯಾಜ್ಯ, ಸಿರಂಜ್, ಮಾತ್ರೆ, ಸಿರಪ್, ಬಾಟಲ್ ಗಳು ಮತ್ತು ಮುಟ್ಟಿನ ವೇಳೆ ಬಳಸುವ ಪ್ಯಾಡ್ ಗಳು ಹಾಗೂ ಮಕ್ಕಳಿಗೆ ಬಳಸುವ ಪ್ಯಾಂಪರ್ಸ್‌ಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಬೇಕು ಎಂದು ಜಾಗೃತಿ ಮೂಡಿಸಿದರು.

ನಗರಸಭೆ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ ಪ್ಲಾಸ್ಟಿಕ್ ಸೇರಿದಂತೆ ಕೆಲವು ತ್ಯಾಜ್ಯವನ್ನು ಮರುಬಳಕೆ ಮಾಡಲು ಬಳಸಿಕೊಳ್ಳಲಿದೆ. ಇದರಿಂದ ಸಮಾಜ ಹಾಗೂ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದು. ಪರಿಸರ ಸ್ವಚ್ಛವಾಗಿಡುವುದಲ್ಲದೆ, ಆರೋಗ್ಯಕರ ಸಮಾಜಕ್ಕೂ ಸಹಕಾರಿಯಾಗಲಿದೆ ಎಂದು ಜಾಗೃತಿ ಮೂಡಿಸಲಾಯಿತು.

ಕೆ ಕೆ ಪಿ ಸುದ್ದಿ 01:

ಕನಕಪುರ ನಗರಸಭೆ ಮುಂದೆ ಬೀದಿ ನಾಟಕದ ಮೂಲಕ ರಸ್ತೆಬದಿಗಳಲ್ಲಿ ಕಸ ಸುರಿಯದಂತೆ ಜಾಗೃತಿ ಮೂಡಿಸಲಾಯಿತು.