ಸಾರಾಂಶ
ಮಕ್ಕಳ ಬಾಲ್ಯವನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಬಳ್ಳಾರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನೆ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಮತ್ತು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.ಇದೇ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಝುಬೇರ್, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಅಳಿಸಿ-ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಬಾಲ ಕಾರ್ಮಿಕರನ್ನು ದುಡಿತದಿಂದ ಬಿಡಿಸಬೇಕು. ಮಕ್ಕಳ ಬಾಲ್ಯವನ್ನು ರಕ್ಷಿಸಬೇಕು ಎಂಬ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ಮೈದೂರು, ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ, ಕಾರ್ಮಿಕ ನಿರೀಕ್ಷಕರಾದ ರಮೇಶ್, ಪರಶುರಾಮ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಹಾಗೂ ಇತರರಿದ್ದರು.ಜಾನಪದ ಕಲಾ ತಂಡವು ಜಾಗೃತಿ ಗೀತೆಗಳ ಮೂಲಕ ಬಾಲ ಕಾರ್ಮಿಕ ಪದ್ಧತಿ ಮತ್ತು ಕಿಶೋರ ಕಾರ್ಮಿಕ ಪದ್ಧತಿಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದು, ನಗರದ ನಾನಾ ಕಡೆ ಜಾಥಾ ಸಂಚರಿಸಲಿದೆ.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಜಾಥಾಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ, ಎಡಿಸಿ ಮಹಮ್ಮದ್ ಎನ್. ಝುಬೇರ್ ಚಾಲನೆ ನೀಡಿದರು.