ಅನುವಂಶಿಕ ದೋಷಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು: ಮೀನಾ ನಾಗರಾಜ್‌

| Published : Dec 08 2024, 01:19 AM IST

ಅನುವಂಶಿಕ ದೋಷಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು: ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಮಾನಸಿಕ ಅಸ್ವಸ್ಥತೆ ಹಾಗೂ ಗಮನ ಕೊರತೆ ಸೇರಿದಂತೆ ವಿವಿಧ ಅಂಗ ವೈಕಲ್ಯತೆಗೆ ಕಾರಣವಾದ ಅನುವಂಶಿಕ ದೋಷ ಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವುಗಳನ್ನು ತಡೆಗಟ್ಟುವಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಾನಸಿಕ ಅಸ್ವಸ್ಥತೆ ಹಾಗೂ ಗಮನ ಕೊರತೆ ಸೇರಿದಂತೆ ವಿವಿಧ ಅಂಗ ವೈಕಲ್ಯತೆಗೆ ಕಾರಣವಾದ ಅನುವಂಶಿಕ ದೋಷ ಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಅವುಗಳನ್ನು ತಡೆಗಟ್ಟುವಲ್ಲಿ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ವ್ಯಕ್ತಿ ತನ್ನ ದೈನಂದಿನ ಚಟುವಟಿಕೆಗಳನ್ನು ಸ್ವತಃ ಮಾಡಿಕೊಳ್ಳಲು ಅಡೆ ತಡೆ ಉಂಟು ಮಾಡುತ್ತಿದ್ದರೆ ಅಥವಾ ದೀರ್ಘ ಕಾಲದಿಂದ ದೈಹಿಕ, ಮಾನಸಿಕ, ಬೌದ್ಧಿಕ ಅಥವಾ ಇಂದ್ರಿಯಗಳ ದುರ್ಬಲತೆ ಸಮಾಜದಲ್ಲಿ ಇತರರೊಂದಿಗೆ ಸಮಾನವಾಗಿ ಪಾಲ್ಗೊಳ್ಳಲು ಸಾಧ್ಯವಾಗದಂತೆ ಅಡ್ಡಿಗೆ ಒಳಗಾಗಿರುವ ವ್ಯಕ್ತಿಗೆ ವಿಕಲತೆಯ ಶೀಘ್ರ ಪತ್ತೆ ಹಚ್ಚುವಿಕೆ, ಶಿಕ್ಷಣ, ಉದ್ಯೋಗ, ತರಬೇತಿ, ಪುನಶ್ಚೇತನ, ಸಾಮಾಜಿಕ ಭದ್ರತೆ ಹಾಗೂ ಇತರೆ ಸೌಲಭ್ಯ ಕಲ್ಪಿಸಿ ವಿಕಲಚೇತನರು ತಮ್ಮ ವಿಶೇಷ ಸಾಮರ್ಥ್ಯವನ್ನು ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ಬಳಸಲು ಅವಕಾಶ ಕಲ್ಪಿಸಿಕೊಟ್ಟು ದೇಶದ ಕ್ರಿಯಾಶೀಲ ಪ್ರಜೆಗಳಾಗಲು ಅನುವು ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆ ಜಾರಿ ಮಾಡಿದೆ ಇವುಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಎಂದರು.ತಪಾಸಣಾ ಶಿಬಿರಗಳ ಮೂಲಕ ಅಂಗವಿಕಲರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆ ವಿತರಿಸಬೇಕು. ದೈಹಿಕ, ವಾಕ್ ಚಿಕಿತ್ಸೆ ಹಾಗೂ ಇತರೆ ಸೇವೆಗಳನ್ನು ನೀಡುವ ಜೊತೆಗೆ ಅಂಗವಿಕಲತೆ ಪ್ರಮಾಣ ಪತ್ರ ನೀಡಬೇಕು. ಅಂಗವಿಕಲತೆ ನಿವಾರಣೆ ಶಸ್ತ್ರ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಜಿಲ್ಲೆಯಾದ್ಯಂತ ತಪಾಸಣಾ ಶಿಬಿರಗಳ ಮೂಲಕ ಗುರುತಿಸಿರುವ ದೃಷ್ಠಿ ದೋಷವಿರುವ ಅಂಗವಿಕಲ ಮಕ್ಕಳನ್ನು ನಿವೇದಿತಾ ಹಾಗೂ ಆಶಾ ಕಿರಣ ಅಂಧಮಕ್ಕಳ ಪಾಠ ಶಾಲೆಗಳಿಗೆ ದಾಖಲಿಸಿ ಅವರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಕ್ರಮವಹಿಸಬೇಕು. ತಮ್ಮ ಮಕ್ಕಳನ್ನು ವಿಕಲಚೇತನರೆಂದು ಪ್ರಮಾಣಿಕರಿಸಲು ಪೋಷಕರು ಹಿಂಜರಿದಲ್ಲಿ ಅವರಿಗೆ ಸಮಾಲೋಚನೆ ಮೂಲಕ ಸರ್ಕಾರ ದಿಂದ ದೊರಕುವ ವಿಶೇಷ ಸೌಲಭ್ಯಗಳ ಮಾಹಿತಿ ನೀಡಿ ಪ್ರಮಾಣ ಪತ್ರ ವಿತರಿಸಬೇಕು. ಸ್ಥಳೀಯ ಸಂಪನ್ಮೂಲ ಗಳನ್ನು ಬಳಸಿ ವಿಕಲಚೇತನರಿಗೆ ತರಬೇತಿ ನೀಡಿ ಸೂಕ್ತ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಸಬಲರ ನ್ನಾಗಿಸುವುದಲ್ಲದೆ ವಿಕಲಚೇತನ ಸ್ನೇಹಿ ವಾತಾವರಣ ಕಲ್ಪಿಸಿಕೊಡಬೇಕು ಎಂದರು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೀರಭದ್ರಯ್ಯ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ವಿಶೇಷ ತಪಾಸಣೆ ನಡೆಸಿ ಅಂಗ ವೈಕಲ್ಯತೆ ಕಂಡು ಬರುವ ಮಕ್ಕಳು, ಸಾರ್ವಜನಿಕರಿಗೆ ವಿಕಲ ಚೇತನರ ವಿಶಿಷ್ಟ ಗುರುತಿನ ಚೀಟಿ ನೀಡಿ ಇಲಾಖೆ ಹಾಗೂ ಸರ್ಕಾರದಿಂದ ದೊರಕಬಹುದಾದ ಸೌಲಭ್ಯಗಳ ಮಾಹಿತಿ ನೀಡಿ ಅಗತ್ಯವಿರುವ ಸಾಧನ ಸಲಕರಣೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 22618 ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿಗೆ ಅರ್ಜಿಗಳು ಬಂದಿದ್ದು, ಇವುಗಳಲ್ಲಿ 15626 ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಉಳಿಕೆ ಅರ್ಜಿಗಳನ್ನು ಪರಿಶೀಲಿಸಿ ಗುರುತಿನ ಚೀಟಿ ವಿತರಿಸಲಾಗವುದು ಎಂದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್, ಡಿ ಡಿ ಆರ್ ಸಿ ಕಾರ್ಯದರ್ಶಿ ಕೆ. ಪ್ರಕಾಶ್ ಉಪಸ್ಥಿತರಿದ್ದರು. 7 ಕೆಸಿಕೆಎಂ 1ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಪಂ ಸಿಇಒ ಕೀರ್ತನಾ ಇದ್ದರು.