2ನೇ ಹಂತ: ನಾಳೆ ಬಹಿರಂಗ ಪ್ರಚಾರ ಅಂತ್ಯ

| Published : May 04 2024, 01:32 AM IST

ಸಾರಾಂಶ

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ನಡೆದ ಅಬ್ಬರ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬೀಳಲಿದ್ದು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಮುಖಂಡರು ಕ್ಷೇತ್ರ ಬಿಟ್ಟು ತೆರಳಲಿದ್ದಾರೆ.

- ಕ್ಷೇತ್ರ ಬಿಟ್ಟು ಹೊರಡಲಿರುವ ಹೊರಗಿನ ನಾಯಕರು

- ನಾಳೆ ಸಂಜೆಯಿಂದ ಮನೆಮನೆ ಪ್ರಚಾರಕ್ಕಷ್ಟೇ ಅವಕಾಶ

- 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ಕ್ಕೆ ಚುನಾವಣೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ನಡೆದ ಅಬ್ಬರ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬೀಳಲಿದ್ದು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಮುಖಂಡರು ಕ್ಷೇತ್ರ ಬಿಟ್ಟು ತೆರಳಲಿದ್ದಾರೆ.

ಇದೇ 7 ರಂದು ಎರಡನೇ ಹಂತದ ಚುನಾವಣೆ ನಡೆಯಲಿದ್ದು, 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮತದಾನದ 48 ಗಂಟೆ ಮೊದಲು ಶೂನ್ಯ ಅವಧಿ ಪ್ರಾರಂಭವಾಗುವ ಕಾರಣ ಯಾವುದೇ ರೀತಿಯ ಅಬ್ಬರ ಪ್ರಚಾರ ಕೈಗೊಳ್ಳುವಂತಿಲ್ಲ. ಭಾನುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕಾಗಿದೆ. ಆದರೆ, ಕಣದಲ್ಲಿರುವ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲು ಅವಕಾಶ ಇದೆ. ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಮನವೊಲಿಕೆಗೆ ಅಂತಿಮ ಕಸರತ್ತು ನಡೆಸಲಿದ್ದಾರೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಪಡಿಸಿ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಕ್ಷೇತ್ರ ಬಿಟ್ಟು ತೆರಳಿದ್ದಾರೆ. ಒಂದು ವೇಳೆ ಅಕ್ರಮವಾಗಿ ತಂಗುವ ಸಾಧ್ಯತೆ ಇರುವ ಕಾರಣ ಚುನಾವಣಾ ಸಿಬ್ಬಂದಿ ಕಲ್ಯಾಣ ಮಂಟಪ, ಹೋಟೆಲ್, ಅತಿಥಿಗೃಹ, ವಸತಿಗೃಹ ಸೇರಿದಂತೆ ಇತರೆ ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಕ್ಷೇತ್ರ ಬಿಟ್ಟು ತೆರಳುವ ನಿರ್ಬಂಧ ಇರುವುದಿಲ್ಲ.

ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ವರಿಷ್ಠರಾದ ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಬಿರುಸಿನ ಮತ ಪ್ರಚಾರ ಕೈಗೊಂಡಿದ್ದಾರೆ. ಇವರೆಲ್ಲಾ ಭಾನುವಾರ ಸಂಜೆ ಬಳಿಕ ಕ್ಷೇತ್ರದಿಂದ ದೂರ ಉಳಿಯಲಿದ್ದಾರೆ.