ಸಾರಾಂಶ
ಕೆ.ಎಂ.ದೊಡ್ಡಿ : ಒಂದೇ ದಿನದಲ್ಲಿ ಐದು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ವೈದ್ಯರನ್ನು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರು ಅಭಿನಂದಿಸಿದರು.
ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಅರ್ಜುನ್ ಕುಮಾರ್ ಮತ್ತು ಮಕ್ಕಳ ತಜ್ಞೆ ಡಾ.ಮಧುರ ಅವರು ಒಂದೇ ದಿನ ಐದು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಹಿನ್ನೆಲೆಯಲ್ಲಿ ವೈದ್ಯರ ಸೇವೆಯನ್ನು ಮುಕ್ತ ಕಂಠದದಿಂದ ಪ್ರಶಂಸಿಸಿ ಅಭಿನಂದಿಸಿದರು.
ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆಗೆ ಮೊರೆ ಹೋಗುವ ಪ್ರವೃತ್ತಿ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ಐದು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುತ್ತದೆ ಎಂಬುವುದನ್ನು ವೈದ್ಯರು ತೋರಿಸಿದ್ದಾರೆ.
ಕಳೆದ ಒಂದು ವರ್ಷಗಳಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಅರ್ಜುನ್ ಕುಮಾರ್ ಅವರು ಸೇವೆಗೆ ಬಂದ ನಂತರ ಸುಮಾರು 150 ಕ್ಕೂ ಹೆಚ್ಚಿನ ಸಹಜ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಗಳ ಮೂಲಕ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮಾಡಿಸುವ ಡಾ.ಅರ್ಜುನ್‌ಕುಮಾರ್ ಅವರು ಕ್ಲಿಸ್ಟಕರವಾದಂತಹ ಪ್ರಕರಣಗಳನ್ನು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಹೆರಿಗೆ ಮಾಡಿಸಿ ಬಡ ಜನತೆಗೆ ನೆರವಾಗುತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಹಣ ನೀಡಿ ಹೆರಿಗೆ ಮಾಡಿಸಲು ಆಗದ ಹಿನ್ನೆಲೆಯಲ್ಲಿ ವೈದ್ಯರು ಬಡವರ ಸಂಜೀವಿನಿಯಾಗಿ ಜನ ಮನ್ನಣೆ ಗಳಿಸುತ್ತಿದ್ದಾರೆ.
ಗರ್ಭಿಣಿಯರಿಗೆ ಸಕಾಲದಲ್ಲಿ ಪ್ರಯೋಗಲಯಾದ ಮೂಲಕ ರಕ್ತ ಪರಿಶೀಲನೆ, ಮಾತ್ರೆಗಳು ಹಾಗೂ ಔಷಧೋಪಚಾರಗಳನ್ನು ಉಚಿತವಾಗಿ ನೀಡುವ ಮೂಲಕ ಸಮುದಾಯ ಆರೋಗ್ಯ ಕೇಮದ್ರ ಸುತ್ತಮುತ್ತಲಿನ ಗ್ರಾಮಗಳ ಬಡ ಮಧ್ಯಮ ವರ್ಗಗಳ ಮಹಿಳೆರ ನೆರವಿಗೆ ಬಂದಿದ್ದಾರೆ.
ಡಾ.ಅರ್ಜುನ್ ಕುಮಾರ್ ಅವರಿಗೆ ಹೆರಿಗೆಯಾದ ಮಗುವಿನ ಆರೋಗ್ಯ ವಿಚಾರಸಲು ಮಕ್ಕಳ ತಜ್ಞೆ ಡಾ.ಮಧುರ ಅವರು ಸಹ ನೆರವಾಗುತ್ತಿದ್ದಾರೆ. ಈ ಇಬ್ಬರ ಕರ್ತವ್ಯ ಸೇವೆ ಪರಿಗಣಿಸಿ ಕೆ.ಎಂ.ದೊಡ್ಡಿ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸೇವೆ ಸಹಕಾರ ನೀಡುವ ಭರವಸೆಯೊಂದಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸುವ ಮೂಲಕ ವೈದ್ಯರಿಗೆ ಇನ್ನಷ್ಟು ಸೇವೆಗೆ ಪ್ರೇರಣೆ ದೊರಕುವಂತೆ ಮಾಡಲಾಯಿತು.