ಲಕ್ಷ್ಮೇಶ್ವರ: ಬಿಜೆಪಿ ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಸದೃಢಗೊಳಿಸುವ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಕಾರ್ಯವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಭಾನುವಾರ ರಾಮಗೇರಿ ಗ್ರಾಮದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಾಲಯ ಉದ್ಘಾಟನೆ ಹಾಗೂ ಎಸ್‌ಐಆರ್ ಜಾಗೃತಿ ಮಹಾ ಅಭಿಯಾನ ಭಾನುವಾರ ನಡೆಯಿತು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಲಿಂಗರಾಜ ಪಾಟೀಲ ಅವರು ಬೂತ್ ಕಾರ್ಯಾಲಯವನ್ನು ಉದ್ಘಾಟಿಸಿದರು. ಶಾಸಕ ಡಾ. ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಎಸ್‌ಐಆರ್ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಬೂತ್ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಲಿಂಗರಾಜ ಪಾಟೀಲ ಅವರು, ಬಿಜೆಪಿಯ ಶಕ್ತಿ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಸಂಘಟನೆಯಲ್ಲಿದೆ. ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆ ಸಕ್ರಿಯವಾಗಿದ್ದರೆ ಪಕ್ಷದ ಚಟುವಟಿಕೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲಿವೆ ಎಂದರು.

ಕಾರ್ಯಕರ್ತರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸರ್ಕಾರದ ಜನಪರ ಯೋಜನೆಗಳ ಮಾಹಿತಿಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ಬೂತ್ ಕಾರ್ಯಾಲಯಗಳು ಕೇವಲ ಚುನಾವಣಾ ಸಂದರ್ಭಕ್ಕೆ ಸೀಮಿತವಾಗದೆ, ವರ್ಷಪೂರ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸೇವಾ ಕೇಂದ್ರಗಳಾಗಬೇಕು ಎಂದರು.ನಂತರ ಎಸ್‌ಐಆರ್ ಮಹಾ ಅಭಿಯಾನದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅರ್ಹ ಮತದಾರರೆಲ್ಲರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿದೆಯೇ ಎಂಬುದನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಎಸ್‌ಐಆರ್ ಫಾರ್ಮ್ ಭರ್ತಿ ಮಾಡಬೇಕು.

ಮನೆಗಳಲ್ಲಿ ಫಾರ್ಮ್ ಭರ್ತಿ ಮಾಡಲು ಸಾಧ್ಯವಾಗದವರು, ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪಡೆದಿರದವರಿಗೆ ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಸ್ಥಳದಲ್ಲಿಯೇ ನೆರವು ನೀಡಬೇಕು. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.ಅಭಿಯಾನದ ಅಂಗವಾಗಿ ಮುಖಂಡರು ಮತ್ತು ಕಾರ್ಯಕರ್ತರು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಮನೆ ಮನೆಗೆ ಭೇಟಿ ನೀಡಿ ಎಸ್‌ಐಆರ್ ಫಾರ್ಮ್ ಭರ್ತಿ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗಂಗಾಧರ ಮೆಣಸಿನಕಾಯಿ, ಮಹೇಂದ್ರ ಬೆಟಗೇರಿ ಸಂತೋಷ ಲಮಾಣಿ, ಭೀಮಣ್ಣ ಯಂಗಾಡಿ, ದುಂಡೇಶ ಲಮಾಣಿ, ಶಂಕರ ಪೂಜಾರ, ಚನ್ನಬಸಪ್ಪ ಬೆಟಸೂರ, ಚಿದಾನಂದ ಮಲ್ಲೂರ, ರಮೇಶ ಬೆಳ್ಳಿಗಟ್ಟಿ, ಕೃಷ್ಣ ಪೂಜಾರ, ಪ್ರದೀಪ ಪಾಟೀಲ, ಬೀರಪ್ಪ ಕೆರೂರ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾರ್ಯಕರ್ತರು, ಬಿಎಲ್‌ಒಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.