ಸಾರಾಂಶ
ಡೆಂಘೀ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಮಿತಿ ಸಭೆಯಲ್ಲಿ ತಾಪಂ ಇಒ ಸೋಮಶೇಖರ್ ಬಿರಾದಾರ್ ಸೂಚನೆಕನ್ನಡಪ್ರಭ ವಾರ್ತೆ ಶಹಾಪುರ
ಡೆಂಘೀ ಜ್ವರ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಯಂತ್ರಣ ಮಾಡುವಲ್ಲಿ ಸರಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್ ಹೇಳಿದರು.ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ಶಹಾಪುರ ಇವರ ಸಹಯೋಗದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿ, ರಸ್ತೆ, ಚರಂಡಿ, ತಗ್ಗು-ಗುಂಡಿಗಳಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಂಡು ಕುಡಿವ ನೀರಿನ ಮೂಲಗಳೊಂದಿಗೆ ಕಲುಷಿತ ನೀರು ಸೇರದಂತೆ ಎಚ್ಚರ ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಸಾರ್ವಜನಿಕರು ಉಪಯೋಗಿಸುವ ಗ್ರಾಮಗಳಲ್ಲಿನ ತೆರೆದ ಬಾವಿಗಳ ನೀರನ್ನು ಪರೀಕ್ಷೆ ಮಾಡಿಸಿ, ಕುಡಿಯಲು ಯೋಗ್ಯವಲ್ಲದಿದ್ದರೆ, ಬಾವಿಯ ಹತ್ತಿರ ಜನರಿಗೆ ಕಾಣುವಂತೆ ನೀರು ಕುಡಿಯಲು ಯೋಗ್ಯವಲ್ಲ ಎಂದು ಸೂಚನಾ ಫಲಕ ಅಳವಡಿಸಬೇಕು. ಪ್ರತಿ 15ದಿನಕ್ಕೊಮ್ಮೆ ಕುಡಿವ ನೀರನ್ನು ಪರೀಕ್ಷೆ ಮಾಡಿಸಿ, ವಾರದಲ್ಲಿ ಏಳು ದಿನಕ್ಕೊಮ್ಮೆ ಎಲ್ಲ ಗ್ರಾಮಗಳಲ್ಲಿ ಫಾಗಿಂಗ್ ಮಾಡಬೇಕೆಂದು ತಿಳಿಸಿದರು.
ಮಳೆಗಾಲ ಆರಂಭವಾಗಿದ್ದರಿಂದ ಮುಂದಿನ ಎರಡು ತಿಂಗಳವರೆಗೆ ಸಾರ್ವಜನಿಕರು ಕುಡಿವ ನೀರನ್ನು ಕುದಿಸಿ, ಸೋಸಿ, ಆರಿಸಿ ಕುಡಿಯಬೇಕು, ಮನೆಯ ಸುತ್ತ-ಮುತ್ತ ರಬ್ಬರ್ ಟ್ಯೂಬ್, ಟೈಯರ್, ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಬಾಟಲ್ ಹಾಗೂ ಇತರೆ ಘನತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ಧ್ವನಿವರ್ಧಕದ ಹಾಗೂ ಡಂಗೂರ ಸಾರುವ ಮೂಲಕ ಜನರಲ್ಲಿ ಜಾಗೃತಿ ಮುಡಿಸಲು ಕ್ರಮವಹಿಸುವಂತೆ ತಿಳಿಸಿದರು.ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಮಾತನಾಡಿ, ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿಯ ಸ್ಥಳಗಳನ್ನು ನಾಶ ಮಾಡುವ ದಿನ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್-ಈಜಿಪ್ಟಿ ಸೊಳ್ಳೆಗಳಿಂದ ಡೆಂಘೀ ಜ್ವರ ಬರುತ್ತದೆ. ಮನೆಯಲ್ಲಿನ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರಲ್, ಬಕೆಟ್, ಕೊಡಗಳಲ್ಲಿ ನೀರನ್ನು ಸಂಗ್ರಹ ಮಾಡಿದ್ದರೆ ಅವುಗಳನ್ನು ಮುಚ್ಚಿಡಬೇಕು ಹಾಗೂ ವಾರಕ್ಕೊಂದು ದಿನ ಉಜ್ಜಿ ಸ್ವಚ್ಛಗೊಳಿಸಬೇಕು ಎಂದರು.
ಸಭೆಯಲ್ಲಿ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನೀಯರ್ ಹಾಗೂ ತಾಪಂ ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್, ತಾಲೂಕು ಯೋಜನಾಧಿಕಾರಿ ಸುಬ್ಬರಾಯ ಚೌದ್ರಿ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.ಸ್ವಚ್ಛತೆಗೆ ಆದ್ಯತೆ ನೀಡಿ: ಡಾ.ರಮೇಶ
ಮನೆಯ ಸುತ್ತ-ಮುತ್ತ, ಶಾಲಾ-ಕಾಲೇಜು, ಕಚೇರಿ, ಅಂಗನವಾಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಡೆಂಘೀ ಜ್ವರದಿಂದ ರಕ್ಷಿಸಿಕೊಳ್ಳಲು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ, ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದರು.