ಸಾಹಿತಿ ಲಕ್ಷ್ಮೀಶ ತೋಳ್ಪಾಡಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ

| Published : Mar 18 2024, 01:46 AM IST

ಸಾರಾಂಶ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾರ್ವಜನಿಕರ ಪರವಾಗಿ ಕೆ. ಸೀತಾರಾಮ ರೈ ಸವಣೂರು ಅಭಿನಂದಿಸಿದರು. ಹಿರಿಯ ಸಾಹಿತಿ ಡಾ. ವರದರಾಜ ಚಂದ್ರಗಿರಿ ಅವರು ತೋಳ್ಪಾಡಿಯವರ ಭಾರತಯಾತ್ರೆ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಕವಿಯ ಮನಸ್ಸಿನ ಒಳಗಿನ ಮನೋಭಾವಗಳನ್ನು ಕೃತಿಯ ಮೂಲಕ ಗಮನಿಸಬಹುದಾಗಿದೆ. ವಿಭಿನ್ನ ನೆಲೆಗಳಲ್ಲಿ ಪಾತ್ರಗಳನ್ನು ತೋರಿಸುವ ಪ್ರಯತ್ನವನ್ನು ಮಾಡಿದ ತೋಳ್ಪಾಡಿಯವರ ಸಾಹಿತ್ಯದಲ್ಲಿ ಪಾತ್ರಗಳನ್ನು ಗಮನಿಸುವ ರೀತಿ ಅತ್ಯದ್ಭುತವಾಗಿದೆ ಎಂದು ಹಿರಿಯ ವಿದ್ವಾಂಸ ಡಾ. ವಸಂತ ಕುಮಾರ ತಾಳ್ತಜೆ ಹೇಳಿದರು. ಪುತ್ತೂರು ಅನುರಾಗ ವಠಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕ, ಕರ್ನಾಟಕ ಸಂಘ ಪುತ್ತೂರು, ಶ್ರೀ ಲಕ್ಷ್ಮೀಶ ತೋಳ್ಪಾಡಿ ಸಾರ್ವಜನಿಕ ಅಭಿನಂದನಾ ಸಮಿತಿ ಪುತ್ತೂರು ವತಿಯಿಂದ ಭಾನುವಾರ ಸಂಜೆ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ಸಾರ್ವಜನಿಕ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.

ಹಿರಿಯ ಸಾಹಿತಿ ಡಾ. ನರೇಂದ್ರ ರೈ ದೇರ್ಲ ಮಾತನಾಡಿ ಎದೆಗಾರಿಕೆ ಎಂಬುದು ಬರಹಗಾರ, ಸಾಹಿತಿಗೆ ಇರಬೇಕಾದ ಕರ್ತವ್ಯವಾಗಿದೆ. ಈ ಬದ್ಧತೆಯಿಂದ ಮಹಾಕಾವ್ಯ ಮತ್ತು ವರ್ತಮಾನದ ಬಗ್ಗೆ ಮಾತನಾಡುವ ಅರ್ಹತೆ ಬರುತ್ತದೆ. ಅನೇಕರು ಮಹಾಭಾರತದ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಭಾರತದ ಬಗ್ಗೆ ಮಾತನಾಡುವುದಿಲ್ಲ. ಆದರೆ ತೋಳ್ಪಾಡಿ ಅವರು ಇವೆರಡರ ಬಗ್ಗೆ ಒಟ್ಟಿಗೆ ಮಾತನಾಡುತ್ತಾರೆ. ನಮ್ಮ ಮಣ್ಣು, ನೀರು, ಪರಿಸರದ ಬಗ್ಗೆ ಕಾಳಜಿ ಇರುವ ಇಂತಹ ಸಾಹಿತಿಗಳು ಇನ್ನುಷ್ಟು ಸಮಾಜಕ್ಕೆ ಬೇಕಾಗಿದೆ ಎಂದು ಹೇಳಿದರು. ಅಭಿನಂದನಾ ಭಾಷಣವನ್ನು ಮಾಡಿದ ಹಿರಿಯ ಸಾಹಿತಿ ಗುರುರಾಜ ಮಾರ್ಪಳ್ಳಿ, ಗಾಢವಾದ ರೀತಿಯಲ್ಲಿ ಕೆಣಕಿದಾಗ ಸುಂದರವಾದ ಉತ್ತರ ನೀಡುವ ತೋಳ್ಪಾಡಿಯವರಿಗೆ ಸೃಷ್ಟಿಯ ಹಿಂದಿನ ಗಾಢ ನಂಬಿಕೆ ಮೇಲಿನ ವಿಶ್ವಾಸ ಬಹಳ ದೊಡ್ಡದಾಗಿದೆ. ಸಮಾಜದ ವೇಷಗಳ ಮಧ್ಯೆ ಇದೆಲ್ಲವನ್ನೂ ಕಳಚಿ ನೋಡುವ ರೀತಿ ಅದ್ಭುತವಾಗಿದೆ. ಅನಗತ್ಯಕ್ಕೆ ಬೇಕಾದಷ್ಟು ಖರ್ಚು ಮಾಡುವ ರಾಜಕೀಯದವರು ಕಲೆ ಸಾಹಿತ್ಯಕ್ಕೆ ಬೆಲೆ ಕೊಡದಿರುವುದು ಬೇಸರದ ವಿಚಾರವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾರ್ವಜನಿಕರ ಪರವಾಗಿ ಕೆ. ಸೀತಾರಾಮ ರೈ ಸವಣೂರು ಅಭಿನಂದಿಸಿದರು. ಹಿರಿಯ ಸಾಹಿತಿ ಡಾ. ವರದರಾಜ ಚಂದ್ರಗಿರಿ ಅವರು ತೋಳ್ಪಾಡಿಯವರ ಭಾರತಯಾತ್ರೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷ ಪುರಂದರ ಭಟ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ. ಪಿ. ಶ್ರೀನಾಥ್ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು. ವಿವೇಕಾನಂದ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಶಕುಮಾರ್ ಅಭಿನಂದನಾ ಪತ್ರ ವಾಚಿಸಿ, ವಂದಿಸಿದರು. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.