ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆ ವೇಳೆ ಬಳಸಲಾಗುವ ಅಬ್ಬರದ ಧ್ವನಿವರ್ಧಕಗಳಿಂದ ಮಧ್ಯ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವ ಜೊತೆಗೆ ಪುಟ್ಟ ಮಕ್ಕಳು, ಹಿರಿಯ ನಾಗರಿಕರು, ರಾತ್ರಿ ಪಾಳಿ ಮುಗಿಸಿಕೊಂಡು ಬರುವ ನೌಕರರಿಗೆ ಕಿರಿಕಿರಿ ಉಂಟಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಣೆ ವೇಳೆ ಬಳಸಲಾಗುವ ಅಬ್ಬರದ ಧ್ವನಿವರ್ಧಕಗಳಿಂದ ಮಧ್ಯ ವಾರ್ಷಿಕ ಪರೀಕ್ಷೆ ಎದುರಿಸುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿರುವ ಜೊತೆಗೆ ಪುಟ್ಟ ಮಕ್ಕಳು, ಹಿರಿಯ ನಾಗರಿಕರು, ರಾತ್ರಿ ಪಾಳಿ ಮುಗಿಸಿಕೊಂಡು ಬರುವ ನೌಕರರಿಗೆ ಕಿರಿಕಿರಿ ಉಂಟಾಗುತ್ತಿದೆ.ಸೆ.14ರಂದು ಗಣೇಶ ಚತುರ್ಥಿ ಮುಗಿದಿದ್ದರೂ ನಗರದ ಅನೇಕ ಕಡೆಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮುಂದುವರಿದಿದೆ. ಕೆಲವು ಗಣೇಶ ಮೂರ್ತಿಗಳನ್ನು 5 ದಿನ, 9 ದಿನ, 11 ದಿನ ಎಂದು ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ಮಾಡಲಾಗುತ್ತದೆ. ಆದರೆ, ಬೆಳಗಿನ 5 ಗಂಟೆಯಿಂದಲೇ ಧ್ವನಿವರ್ಧಕಗಳಲ್ಲಿ ಜೋರಾಗಿ ಸೌಂಡ್ ಇಟ್ಟು ಭಕ್ತಿ ಗೀತೆ, ಸಿನಿಮಾ ಗೀತೆಗಳನ್ನು ಹಾಕಲಾಗುತ್ತದೆ. ಇಡೀ ಪ್ರದೇಶಕ್ಕೆ ಕೇಳಿಸುವಂತೆ ಜೋರಾದ ಧ್ವನಿವರ್ಧಕಗಳಿಂದ ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವವರು ಇನ್ನೇನು ನಿದ್ರೆ ಮಾಡಬೇಕು ಎನ್ನುವಷ್ಟರಲ್ಲಿ ಅಬ್ಬರದ ಸಂಗೀತದ ಸದ್ದು ನಿದ್ರಾಭಂಗಕ್ಕೆ ಕಾರಣವಾಗುತ್ತಿದೆ. ಇನ್ನು ಪುಟ್ಟ ಮಕ್ಕಳು, ಹಿರಿಯ ನಾಗರಿಕರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಬಹುತೇಕ ಶಾಲೆಗಳಲ್ಲಿ ಈಗ ಮಧ್ಯಂತರ ಟೆಸ್ಟ್‌ಗಳು ಪ್ರಾರಂಭವಾಗಿವೆ. ಬೆಳಗ್ಗೆ ಮತ್ತು ಸಂಜೆ ಅವಧಿಯಲ್ಲಿ ವ್ಯಾಸಂಗ ಮಾಡುವ ಮಕ್ಕಳು ಧ್ವನಿವರ್ಧಕಗಳ ಕಿರಿಕಿರಿಯಿಂದ ವ್ಯಾಸಂಗಕ್ಕೂ ತೊಂದರೆಯಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬೆಳಗ್ಗೆ 6ರಿಂದ 10ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ನಿಗದಿತ ಮಿತಿಯೊಳಗೆ ಸೌಂಡ್ ಇಟ್ಟು ಬಳಕೆ ಮಾಡಬೇಕು ಎಂಬುವ ನಿಯಮವಿದೆ. ಆದರೆ, ಗಣೇಶ ಹಬ್ಬದ ವೇಳೆ ಈ ನಿಯಮ ಪಾಲನೆಯಾಗುತ್ತಿಲ್ಲ ಎಂದು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಲತಾಣಗಳಲ್ಲೂ ಆಕ್ಷೇಪ:ಅಬ್ಬರದ ಡಿ.ಜೆ. ಸಂಗೀತ ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಕುರಿತು ವಿಡಿಯೋ ಸಮೇತ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನಾಗರಿಕರು, ಹಬ್ಬದ ಆಚರಣೆ ನೆಪದಲ್ಲಿ ಶಬ್ಧ ಮಾಲಿನ್ಯ ಉಂಟು ಮಾಡಿ ಜನರಿಗೆ ತೊಂದರೆ ನೀಡುವುದು ಏಕೆ? ಈ ರೀತಿ ಡಿ.ಜೆ. ಸಂಗೀತ ಹಾಕುವುದು ಸ್ಥಳೀಯ ಸಂಸ್ಕೃತಿಯೇ? ಹಿರಿಯ ನಾಗರಿಕರು, ರೋಗಿಗಳು, ಮಕ್ಕಳಿಗೆ ತೊಂದರೆಯಾಗುವುದಿಲ್ಲವೇ? ಪ್ರಶ್ನಿಸಿದ್ದಾರೆ.
ನಗರದ ಅನೇಕ ಪ್ರದೇಶಗಳಲ್ಲಿ ಗಣೇಶೋತ್ಸವ ಆಚರಣೆಗಾಗಿ ಅಳವಡಿಸುವ ಅಬ್ಬರದ ಧ್ವನಿವರ್ಧಕಗಳಿಂದ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಬ್ಬದ ಆಚರಣೆಯನ್ನು ಪ್ರಶ್ನೆ ಮಾಡಿದರೆ ಆಯೋಜಕರಿಂದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯರು ದೂರು ನೀಡುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ, ಆಯೋಜಕರೇ ಸ್ವಯಂಪ್ರೇರಿತವಾಗಿ ಅರ್ಥ ಮಾಡಿಕೊಂಡು ನಿಯಮಗಳ ಪಾಲನೆ ಮಾಡಬೇಕು ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.-ಬಾಕ್ಸ್-ಪೊಲೀಸರಿಗೆ ದೂರು ನೀಡಬಹುದು:
ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದವರು ಸಮಯವನ್ನು ಪಾಲನೆ ಮಾಡಬೇಕು. ನಿಗದಿತ ಅವಧಿ ಮೀರಿ ಧ್ವನಿವರ್ಧಕಗಳನ್ನು ಬಳಕೆ ಮಾಡುತ್ತಿದ್ದರೆ, ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡಬಹುದು. ಸಂಬಂಧಿಸಿದ ಗಣೇಶ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯ ಬಿದ್ದರೆ ಸೌಂಡ್ ಸೀಸ್ಟಮ್ ಅನ್ನು ಜಪ್ತಿ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.