25ರಂದು ಅಂಬಿಕಾ ವಿದ್ಯಾಲಯದಲ್ಲಿ ಶೃಂಗೇರಿ ಶ್ರೀಗಳಿಗೆ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ

| Published : Apr 22 2024, 02:23 AM IST / Updated: Apr 22 2024, 02:24 AM IST

25ರಂದು ಅಂಬಿಕಾ ವಿದ್ಯಾಲಯದಲ್ಲಿ ಶೃಂಗೇರಿ ಶ್ರೀಗಳಿಗೆ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಎ.೨೪ ರಂದು ಸಂಜೆ ಶ್ರೀ ಗುರುಗಳು ಆಗಮಿಸಲಿದ್ದು, ಅವರನ್ನು ಪೋಳ್ಯ ಲಕ್ಷ್ಮೀ ವೆಂಕಟರಮಣ ಮಠದ ಸಮೀಪದಲ್ಲಿ ಸಮಾಜದ ವಿವಿಧ ಸಮುದಾಯಗಳು ಹಾಗೂ ಅಂಬಿಕಾ ಪರಿವಾರದ ವತಿಯಿಂದ ಪೂರ್ಣಕುಂಭ, ಧೂಳೀ ಪಾದಪೂಜೆಯೊಂದಿಗೆ ಸ್ವಾಗತಿಸಲಾಗುವುದು.

ಕನ್ನಡಪ್ರಭ ವಾರ್ತೆ ಪುತ್ತೂರು

ಶೃಂಗೇರಿ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಪುತ್ತೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಜಗದ್ಗುರುಗಳ ಸಾರ್ವಜನಿಕಕ ಗುರುವಂದನೆ ಹಾಗೂ ಅಂಬಿಕಾ ವಿದ್ಯಾಲಯದ ದಶಾಂಬಿಕೋತ್ಸವ ಸಮಾರೋಪವು ಏ.೨೫ರಂದು ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ನಡೆಯಲಿದೆ.

ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಭಿನಂದನಾ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಎ.೨೪ ರಂದು ಸಂಜೆ ಶ್ರೀ ಗುರುಗಳು ಆಗಮಿಸಲಿದ್ದು, ಅವರನ್ನು ಪೋಳ್ಯ ಲಕ್ಷ್ಮೀ ವೆಂಕಟರಮಣ ಮಠದ ಸಮೀಪದಲ್ಲಿ ಸಮಾಜದ ವಿವಿಧ ಸಮುದಾಯಗಳು ಹಾಗೂ ಅಂಬಿಕಾ ಪರಿವಾರದ ವತಿಯಿಂದ ಪೂರ್ಣಕುಂಭ, ಧೂಳೀ ಪಾದಪೂಜೆಯೊಂದಿಗೆ ಸ್ವಾಗತಿಸಲಾಗುವುದು. ಬಳಿಕ ರಾತ್ರಿ ೮ ಗಂಟೆಯಿಂದ ಶ್ರೀ ಜಗದ್ಗುರುಗಳಿಂದ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.

ಏ.೨೫ರಂದು ಬೆಳಗ್ಗೆ ೯ ಗಂಟೆಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀ ಜಗದ್ಗುರುಗಳ ಸಾನಿಧ್ಯದಲ್ಲಿ ಸರಸ್ವತಿ ಹೋಮ ಪೂರ್ಣಾಹುತಿ ನಡೆಯಲಿದೆ. ೧೦ ಗಂಟೆಯಿಂದ ಅಭಿನಂದನಾ ಕಾರ್ಯಕ್ರಮ ಹಾಗೂ ದಶಾಂಬಿಕೋತ್ಸವ ಸಮಾರೋಪ ಸಮಾರಂಭ ಜಂಟಿಯಾಗಿ ನಡೆಯಲಿದೆ. ಶ್ರೀ ಜಗದ್ಗುರುಗಳು ಆಶೀರ್ವಚನ ನೀಡಿ ಫಲಮಂತ್ರಾಕ್ಷತೆ ನೀಡಲಿದ್ದಾರೆ. ಬಳಿಕ ಶೃಂಗೇರಿ ಶ್ರೀ ಜಗದ್ಗುರುಗಳ ಪಾದಪೂಜೆ, ಬಿಕ್ಷಾವಂದನೆ ನಡೆಯಲಿದೆ. ಅಂಬಿಕಾ ಮಹಾವಿದ್ಯಾಲಯದ ತತ್ವಶಾಸ್ತ್ರ ಉಪನ್ಯಾಸಕ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸಾರ್ವಜನಿಕ ಭಕ್ತಾದಿಗಳಿಗೆ ಪಾದಪೂಜೆ, ಫಲಸಮರ್ಪಣೆ, ಭಿಕ್ಷಾವಂದನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಸಹ ಕಾರ್ಯದರ್ಶಿ ದಿನೇಶ್ ಜೈನ್, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ಇದ್ದರು.