ಸಾರಾಂಶ
ಸುಬ್ರಮಣಿ ಸಿದ್ದಾಪುರ
ಕನ್ನಡಪ್ರಭ ವಾರ್ತೆ ಸಿದ್ದಾಪುರಸಿದ್ದಾಪುರ ವಿರಾಜಪೇಟೆ ರಸ್ತೆಯ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ರಸ್ತೆ ಸಂಪೂರ್ಣ ಹೊಂಡಗಳಿಂದ ಕೂಡಿದೆ. ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರಾಗಿದ್ದು ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದ್ದು ಸಾರ್ವಜನಿಕರು ಹೈರಾಣಾಗಿದ್ದಾರೆ.ಸಿದ್ದಾಪುರದ ಪಾಲಿಬೆಟ್ಟ ರಸ್ತೆ ಜಂಕ್ಷನ್ ನಿಂದ ವಿರಾಜಪೇಟೆ ರಸ್ತೆಯ ಅಂಬೇಡ್ಕರ್ ನಗರದ ಸಮೀಪದವರೆಗೆ ಸುಮಾರು 2 ಕಿ. ಮೀ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಕಳೆದ ಸಾಲಿನ ನವೆಂಬರ್‌ನಲ್ಲಿ ಭೂಮಿಪೂಜೆ ಮಾಡಿದ್ದರು. ಕಾಮಗಾರಿ ಪ್ರಾರಂಭವಾಗಿ 8 ತಿಂಗಳು ಕಳೆದಿದೆ. ರಸ್ತೆಯ ಎರಡು ಕಡೆಗಳಲ್ಲಿ ಚರಂಡಿ ನಿರ್ಮಾಣದ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದ್ದು ರಸ್ತೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರು ಹದಗೆಟ್ಟ ರಸ್ತೆಯಲ್ಲಿಯೆ ಸಂಚರಿಸಬೇಕಾಗಿದೆ. ಪಾಲಿಬೆಟ್ಟ ರಸ್ತೆಯಿಂದ ಹಳೆ ಸಿದ್ದಾಪುರದ ಭಗವತಿ ದೇವಸ್ಥಾನದವರೆಗೆ ಪಟ್ಟಣದ ಎರಡೂ ಬದಿ ಒಳಚರಂಡಿ ಮಾಡಲಾಗುತ್ತಿದೆ ಹಾಗೂ ಮೂರು ಕಡೆಗಳಲ್ಲಿ ಮೋರಿ ಕೆಲಸ ಮಾಡುತ್ತಿದ್ದು ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇಲ್ಲಿಗೆ ಸಮೀಪವೆ ಮೂರು ಶಾಲೆಗಳು ಮತ್ತು ಒಂದು ಖಾಸಗಿ ಆಸ್ಪತ್ರೆಯಿದ್ದು ರಸ್ತೆ ಕಾಮಗಾರಿ ವಿಳಂಬದಿಂದಾಗಿ ಶಾಲಾ ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಯಲ್ಲಿರುವ ಹೊಂಡಗಳಲ್ಲಿ ಕೆಸರು ತುಂಬಿಕೊಂಡಿದ್ದು ವಾಹನ ಸಂಚಾರ ಸಂದರ್ಭ ಕೆಸರು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಮೇಲೆ ಬೀಳುತ್ತಿದ್ದು ವಿದ್ಯಾರ್ಥಿಗಳು ಕೆಸರಿನಲ್ಲಿಯೆ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ದ್ವಿಚಕ್ರ ವಾಹನ ಸವಾರರ ಸಂಕಷ್ಟ ಹೇಳ ತೀರದಂತಾಗಿದ್ದು ಆದಷ್ಟು ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಸ್ತೆ ಕಾಮಗಾರಿ ವಿಳಂಬದ ಬಗ್ಗೆ ಸಾರ್ವಜನಿಕರ ಅಸಮಾಧಾನದಿಂದ ಶಾಸಕ ಪೊನ್ನಣ್ಣ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರೂ ಕಾಮಗಾರಿ ಮಾತ್ರ ಕುಂಟುತ್ತಾ ಸಾಗುತ್ತಿದ್ದು ಸಾರ್ವಜನಿಕರು ಗುತ್ತಿಗೆದಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.--------------------------------------------ರಸ್ತೆ ಕಾಮಗಾರಿ ವಿಳಂಬವಾಗುತ್ತಿದ್ದು ಸಂಚಾರ ಕಷ್ಟವಾಗಿದೆ. ಎರಡು ಮೂರು ಕಡೆ ಮೋರಿ ಕೆಲಸ ಮಾಡುವುದರಿಂದ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಒಂದು ಕಡೆಯ ಮೋರಿ ದಾಟಬೇಕಾದರೆ ಕೆಲವು ಸಮಯ ಕಾಯಬೇಕಾದಂತ ಪರಿಸ್ಥಿತಿ ಇದ್ದು ಸಮಯಕ್ಕೆ ತಲುಪಲು ಕಷ್ಟವಾಗುತ್ತೆ.। ಸುರೇಶ್ ಪಿ ಎಂ . ಬಸ್ ಚಾಲಕ, ವಿರಾಜಪೇಟೆ------------------------------------------------ಈ ರಸ್ತೆಯಲ್ಲಿ ನಾನು ಪ್ರತಿನಿತ್ಯ ಕೆಲಸಕ್ಕೆ ತೆರಳುತ್ತಿದ್ದು ರಸ್ತೆ ಗುಂಡಿಬಿದ್ದ ಪರಿಣಾಮ ನನ್ನ ದ್ವಿಚಕ್ರ ವಾಹನ ಹಾಳಾಗಿದೆ. ಆದಷ್ಟು ಬೇಗ ರಸ್ತೆ ಕೆಲಸ ಮುಗಿಸಲಿ.। ಪಳನಿ . ಟಿ. ವೆಲ್ಡಿಂಗ್ ಕೆಲಸಗಾರ. ಆನಂದಪುರ