ಸಾರಾಂಶ
ರಬಕವಿ ನಗರದ ಮಹಾಲಿಂಗಪುರ ನಾಕಾ ಬಳಿ ಬೇಕಾಬಿಟ್ಟಿ ಅಡ್ಡಾದಿಡ್ಡಿಯಾಗಿ ವಾಹನಗಳ ಸವಾರಿಯಿಂದ ನಿತ್ಯ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ. ಇಲ್ಲಿ ಪಾದಚಾರಿಗಳು, ಶಾಲಾ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡೇ ರಸ್ತೆ ಕ್ರಾಸ್ ಮಾಡುವ ಪರಿಸ್ಥಿತಿ ಉಂಟಾಗಿದೆ.
ಶಿವಾನಂದ ಪಿ.ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿರಬಕವಿ ನಗರದ ಮಹಾಲಿಂಗಪುರ ನಾಕಾ ಬಳಿ ಬೇಕಾಬಿಟ್ಟಿ ಅಡ್ಡಾದಿಡ್ಡಿಯಾಗಿ ವಾಹನಗಳ ಸವಾರಿಯಿಂದ ನಿತ್ಯ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯವಾಗಿದೆ. ಇಲ್ಲಿ ಪಾದಚಾರಿಗಳು, ಶಾಲಾ ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡೇ ರಸ್ತೆ ಕ್ರಾಸ್ ಮಾಡುವ ಪರಿಸ್ಥಿತಿ ಉಂಟಾಗಿದೆ.
ಹೌದು, ಇಲ್ಲಿ ಪೊಲೀಸರಂತೂ ನೋಡಲೂ ಸಿಗುವುದಿಲ್ಲ. ರಬಕವಿ ನಗರಕ್ಕೆ ಪೊಲೀಸ್ ಔಟ್‌ಪೋಸ್ಟ್ ಇದೆಯಾದರೂ ಇಬ್ಬರು ಪೇದೆಗಳು ಮಾತ್ರ ಇರುತ್ತಾರೆ. ಚಿಕ್ಕಪುಟ್ಟ ಘಟನೆಗಳಿಗೆ ದೂರು ನೀಡಲೂ ಸಹ ರಬಕವಿ ನಗರದ ಜನತೆ ೮ ಕಿ.ಮೀ. ದೂರದ ತೇರದಾಳ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ಹೋಗಬೇಕು. ಉಪಠಾಣೆಯ ಪೊಲೀಸರು ನಗರದ ಸಂಚಾರ, ಗಸ್ತು ಸೇರಿದಂತೆ ಯಾವುದೇ ಕೆಲಸದಲ್ಲಿರೋದಿಲ್ಲ. ಕೆಲವೊಮ್ಮೆ ಉಪಠಾಣೆಯಲ್ಲಿ ಸಿಬ್ಬಂದಿ ಇಲ್ಲದಿದ್ದಾಗ ಎದುರಿನ ಪಾನ್‌ಶಾಪ್ ಮಾಲೀಕರೇ ನೋಡಿಕೊಳ್ಳುವುದರಿಂದ ಉಪಠಾಣೆಯ ಪೊಲೀಸರ ಕೆಲಸ ಸುಲಭವಾಗಿದೆ. ತೇರದಾಳ ಠಾಣೆಯ ಪೊಲೀಸರು ಹೊಸದಾಗಿ ನಿರ್ಮಿಸಿದ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳಿಗೆ ದಂಡ ಹಾಕುವುದರಲ್ಲೇ ಬಿಜಿ ಆಗಿರುತ್ತಾರೆ. ಆದರೆ, ರಬಕವಿಯ ಮಹಾಲಿಂಗಪುರ ನಾಕಾ ಬಳಿಯ ಮುಖ್ಯ ರಸ್ತೆಯಲ್ಲಿ ಟಂ ಟಂ ವಾಹನ ಸೇರಿದಂತೆ ಎಲ್ಲ ರೀತಿಯ ವಾಹನ ಸವಾರರು ಅಡ್ಡಾದಿಡ್ಡಿ ನಿಲ್ಲುತ್ತಾರೆ. ಇದೇ ಸ್ಥಳದಲ್ಲಿ ಟಂಟಂ, ಆಟೋ ಸ್ಟ್ಯಾಂಡ್ ಗಳಿವೆ. ಜಮಖಂಡಿ-ಮಹಾಲಿಂಗಪುರ ಮಾರ್ಗವಾಗಿ ರಬಕವಿ-ಮಿರಜ್, ವಿಜಯಪುರದತ್ತ ಹೋಗುವ ಎಲ್ಲಾ ಬಸ್‌ಗಳು ಇಲ್ಲಿ ನಿಂತು ಜನರನ್ನು ಇಳಿಸಿ, ಹತ್ತಿಸಿಕೊಂಡು ಹೋಗುತ್ತವೆ. ಮಹಾರಾಷ್ಟ್ರದಿಂದ ಜಮಖಂಡಿ-ಮಹಾಲಿಂಗಪುರ ಮಾರ್ಗವಾಗಿ ಹೋಗುವ ಎಲ್ಲ ಬಸ್ ಹಾಗೂ ಖಾಸಗಿ ವಾಹನಗಳು ಇದೇ ಸರ್ಕಲ್ ಮೂಲಕ ಹೋಗುವುದರಿಂದ ಸಂಚಾರ ದಟ್ಟಣೆ ಆಗುತ್ತದೆ. ಅಲ್ಲದೆ ಇಲ್ಲಿ ಪೊಲೀಸ್ ಸಿಬ್ಬಂದಿಯೂ ಇರುವುದಿಲ್ಲ. ಪೊಲೀಸ್ ಸಿಬ್ಬಂದಿ ಇದ್ದರೆ ಕನಿಷ್ಟ ಪಕ್ಷ ಅವರ ಅಂಜಿಕೆಯಿಂದಲಾದರೂ ಸರ್ಕಲ್‌ನಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ತಪ್ಪಿಸಬಹುದು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು.ರಬಕವಿಗೆ ಬೇಕಿದೆ ಪ್ರತ್ಯೇಕ ಠಾಣೆ:
ತೇರದಾಳ ಪಟ್ಟಣ ಪಂಚಾಯತಿ ಇದ್ದಾಗಲೂ ರಬಕವಿ ನಗರದ ಜನತೆ ತೇರದಾಳಕ್ಕೆ ತೆರಳಿ ದೂರು ದಾಖಲಿಸಬೇಕಿದ್ದು, ರಬಕವಿ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದರೂ ಪ್ರತ್ಯೇಕ ಠಾಣೆ ಆರಂಭಿಸದ ಸರ್ಕಾರಕ್ಕೆ ಮತ್ತು ಈ ಮುಂಚಿನಿಂದಲೂ ಕೇವಲ ೧ ಕಿಮೀ ದೂರದಲ್ಲಿರುವ ಬನಹಟ್ಟಿ ಠಾಣೆಗೆ ನಗರವನ್ನು ಸೇರ್ಪಡೆಗೊಳಿಸದೇ ದೂರದ ತೇರದಾಳ ಠಾಣೆಗೆ ಸೇರ್ಪಡೆಗೊಳಿಸಿದ ಅಂದಿನ ಪೋಲೀಸ್ ವರಿಷ್ಠಾಧಿಕಾರಿಗಳ ಹುಚ್ಚು ನಿರ್ಧಾರದಿಂದ ರಬಕವಿ ಜನತೆ ಹೈರಾಣಾಗುವಂತಾಗಿದೆ. ಪ್ರತ್ಯೇಕ ಠಾಣೆ ಆರಂಭಿಸಲು ಕುರಿತು ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಪೊಲೀಸ್ ಅಧಿಕಾರಿಗಳಿಗೆ ರಬಕವಿ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ.ಸಣ್ಣಪುಟ್ಟ ಸಮಸ್ಯೆಳಿಗೂ ಪರಿಹಾರ ಬೇಕೆಂದರೆ ರಬಕವಿಯಲ್ಲಿ ಪೂರ್ಣಪ್ರಮಾಣದ ಪೊಲೀಸ್ ಠಾಣೆಯಿಲ್ಲ. ಏನೇ ಸಮಸ್ಯೆಳಿದ್ದರೂ ದೂರದ ೮ ಕಿಮಿ ತೇರದಾಳ ನಗರಕ್ಕೆ ಹೋಗುವಂತಾಗಿದೆ. ರಬಕವಿ-ಬನಹಟ್ಟಿ ಅವಳಿ ನಗರಗಳು ಒಂದೇ ನಗರಸಭೆ ವ್ಯಾಪ್ತಿಯಲ್ಲಿದ್ದರೂ, ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಗೆ ರಬಕವಿ ನಗರದ ಜನತೆ ಬರುವುದಿಲ್ಲ. ಬದಲಾಗಿ ದೂರದ ತೇರದಾಳ ಪಟ್ಟಣಕ್ಕೆ ತೆರಳುವಂತಾಗಿದೆ. ಈ ನಾಕಾದ ಬಳಿ ನಿತ್ಯ ಟ್ರಾಫಿಕ್ ಜಾಮ್‌ನಿಂದ ಬೇಸತ್ತಿದ್ದೇವೆ. ನಮ್ಮ ಮನೆಗೆ ಇದೇ ಮಾರ್ಗದಿಂದ ಹೋಗಬೇಕು. ಚಿಕ್ಕಮಕ್ಕಳು, ಶಾಲೆ-ಕಾಲೇಜುಗಳಿಗೆ ತೆರಳುವ ಮಕ್ಕಳು, ವೃದ್ಧರು ರಸ್ತೆ ದಾಟಲು ಪರದಾಡುವಂತಾಗಿದೆ. ಕಾರಣ ರಬಕವಿ ನಗರಕ್ಕೊಂದು ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಪ್ರಾರಂಭಿಸಬೇಕು.-ಮಹಾದೇವ ಕೋಟ್ಯಾಳ ಜವಳಿ ಉದ್ಯಮಿ ರಬಕವಿ.ರಬಕವಿ ಮಹಾಲಿಂಗಪುರ ನಾಕಾ ಬಳಿ ಟ್ರಾಫಿಕ್ ಜಾಮ್ ಆಗದ ಹಾಗೆ ಸೂಕ್ತ ಕ್ರಮ ಜರುಗಿಸುತ್ತೇವೆ, ನಾಕಾದ ಬಳಿ ಟಂಟಂ ವಾಹನ ಹಾಗೂ ಅಟೋ ಚಾಲಕರಿಗೆ ಟ್ರಾಫಿಕ್ ಆಗದ ಹಾಗೆ ತಿಳಿವಳಿಕೆ ಹೇಳಲಾಗುವುದು, ರಬಕವಿ ಓಪಿ ಸರ್ಕಲ್‌ನಲ್ಲಿರುವ ಓರ್ವ ಸಿಬ್ಬಂದಿಯನ್ನು ರಬಕವಿ ಮಹಾಲಿಂಗಪುರ ನಾಕಾಕ್ಕೆ ಸ್ಥಳಾಂತರಿಸಿ ಸಂಚಾರ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು.
- ಅಪ್ಪಣ್ಣ ಟಿ. ಐಗಳಿ, ಪಿಎಸ್‌ಐ ತೇರದಾಳ.